ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಎನ್ನುವಂತೆ ಕರ್ನಾಟಕ ಲೋಕಸೇವಾ ಆಯೋಗ ಕರೆದಿರುವಂತ 247 ಪಿಡಿಓ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಲಾಗಿದೆ. ಅಲ್ಲದೇ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ಕುರಿತಂತೆ ಕೆಪಿಎಸ್ಸಿಯ ಕಾರ್ಯದರ್ಶಿ ಡಾ.ರಾಕೇಶ್ ಕುಮಾರ್.ಕೆ ಅವರು ತಿದ್ದುಪಡಿ ಅಧಿಸೂಚನೆ ಹೊರಡಿಸಿದ್ದು, ಆಯೋಗವು 2023-24ನೇ ಸಾಲಿನ ಗ್ರೂಪ್-ಸಿ ವೃಂದದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ “ಪಂಚಾಯತಿ ಅಭಿವೃದ್ಧಿ ಅಧಿಕಾರಿ” ಹೈದ್ರಾಬಾದ್-ಕರ್ನಾಟಕ ಸ್ಥಳೀಯ ವೃಂದದ-97 ಹಾಗೂ ಹಾಗೂ ಉಳಿಕೆ ಮೂಲ ವೃಂದದ-150 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಸದರಿ ಅಧಿಸೂಚನೆಯ ಕ್ರಮ ಸಂಖ್ಯೆ:13ರಲ್ಲಿ ಗರಿಷ್ಠ ವಯೋಮಿತಿಯನ್ನು “ಸಾಮಾನ್ಯ ಅರ್ಹತ- 35 ವರ್ಷಗಳು, ಪವರ್ಗ 2ಎ, 2ಬಿ, 3ಎ ಮತ್ತು 3ಬಿ- 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- 40 ವರ್ಷಗಳು” ಎಂದು ನಿಗದಿಪಡಿಸಲಾಗಿತ್ತು ಎಂದಿದ್ದಾರೆ.
ಪ್ರಸ್ತುತ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೆನೆನಿ 2024, ದಿನಾಂಕ:10.09.2024ರಲ್ಲಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿರುತ್ತದೆ.
“ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ, ಎಲ್ಲಾ ಪವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದ.”
ಮೇಲ್ಕಂಡ ಸರ್ಕಾರದ ಆದೇಶದನ್ವಯ ಸದರಿ ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದ, ವಯೋಮಿತಿಯನ್ನು ಕೆಳಕಂಡಂತೆ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದ್ದಾರೆ.
ವಯೋಮಿತಿ:
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ:03.10.2024ಕ್ಕೆ ಆಯಾ ಮೀಸಲಾತಿಗಳ ಮುಂದೆ ನಮೂದಿಸಿರುವ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು ಎಂದು ತಿಳಿಸಿದ್ದಾರೆ.
- ಸಾಮಾನ್ಯ ವರ್ಗದವರಿಗೆ ಗರಿಷ್ಠ – 38 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3 ಬಿ ವರ್ಗದವರಿಗೆ ಗರಿಷ್ಠ 41 ವರ್ಷ
- ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1ರ ವರ್ಗದವರಿಗೆ ಗರಿಷ್ಠ 43 ವರ್ಷಗಳು
ಸರ್ಕಾರದ ಮೇಲ್ಕಂಡ ಆದೇಶದ ಹಿನ್ನೆಲೆಯಲ್ಲಿ ಗ್ರೂಪ್-ಸಿ ವೃಂದದ “ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಎಲ್ಲಾ ಪವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಅರ್ಹ ಅಭ್ಯರ್ಥಿಗಳು ದಿನಾಂಕ:18.09.2024 ರಿಂದ 03.10.2024ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿರುತ್ತದೆ.
ವಿಶೇಷ ಸೂಚನೆ:-
1. ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
2, ವಯೋಮಿತಿಯನ್ನು ಹೊರತುಪಡಿಸಿ ಉಳಿದಂತೆ, ಆಯೋಗದ ಅಧಿಸೂಚನೆ ಸಂಖ್ಯೆ:ಇ(2)598/2023-24/ಪಿಎಸ್‌ಸಿ, ದಿನಾಂಕ:15.03.2024ರಲ್ಲಿ ತಿಳಿಸಲಾಗಿರುವ ಮಾಹಿತಿ/ವಿವರಗಳನ್ನು ಯಥಾವತ್ತಾಗಿ ಅನ್ವಯಿಸಿಕೊಳ್ಳತಕ್ಕದ್ದು ಹಾಗೂ ಹೆಚ್ಚಿನ ವಿವರಗಳಿಗಾಗಿ ಸದರಿ ಅಧಿಸೂಚನೆಯನ್ನು ಓದಿಕೊಳ್ಳತಕ್ಕದ್ದು.
3. ಈಗಾಗಲೇ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.