ದಕ್ಷಣಿ ಕನ್ನಡ: ಜಿಲ್ಲೆಯ ಮಂಗಳೂರಿನ ಕಾಟಿಪಳ್ಳದಲ್ಲಿರುವಂತ ಮಸೀದಿಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣದಿಂದ ಕೂಡಿರುವುದಾಗಿ ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿಯಲ್ಲಿರುವಂತ ಕಾಟಿಪಳ್ಳದ 3ನೇ ಬ್ಲಾಕ್ ನಲ್ಲಿರುವಂತ ಬದ್ರಿಯಾ ಮಸೀದಿಯ ಮೇಲೆ ಕಿಡಿಗೇಡಿಗಳು ನಿನ್ನೆ ರಾತ್ರಿ 10.30ರ ಸುಮಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ.
ಕಿಡಿಗೇಡಿಗಳ ಕಲ್ಲೆಸೆತದಿಂದ ಬದ್ರಿಯಾ ಮಸೀದಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದಾವೆ. ಈ ಕೃತ್ಯವನ್ನು ಎರಡು ಬೈಕ್ ನಲ್ಲಿ ಬಂದಂತ ನಾಲ್ವರು ಕಿಡಿಗೇಡಿಗಳು ಎಸಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಮಸೀದಿ ಬಳಿಯಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿದಂತ ಕಿಡಿಗೇಡಿಗಳನ್ನು ಬಂಧಿಸುವಂತೆ ಮುಸ್ಲೀಂ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದಂತ ಪೊಲೀಸರು, ಪರಿಶೀಲಿಸಿ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಸೀದಿ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.