ಬೆಂಗಳೂರು: 2024ನೇ ಸಾಲಿನ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಮೆರವಣಿಯ ಹಿನ್ನಲೆಯಲ್ಲಿ ದಿನಾಂಕ 14-09-2024ರ ನಾಳೆ ಹಾಗೂ ದಿನಾಂಕ 15-09-2024ರ ನಾಡಿದ್ದು ಕೆಲ ಏರಿಯಾಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 2024ನೇ ಸಾಲಿನ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆಯ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನದ ಅಮಲಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಮಾಡಬಹುದಾದ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ, ಪೂರ್ವ ಮತ್ತು ಈಶಾನ್ಯ ವಿಭಾಗಗಳ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿ, ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಉತ್ತರ, ಪೂರ್ವ ಮತ್ತು ಈಶಾನ್ಯ ವಿಭಾಗಗಳ ಉಪ ಪೊಲೀಸ್ ಆಯುಕ್ತರುಗಳು ಉಲ್ಲೇಖಿತ ಪತ್ರಗಳಲ್ಲಿ ಪ್ರತ್ಯೇಕವಾಗಿ ಮನವಿಯನ್ನು ಸಲ್ಲಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ನಾನು ಸ್ವತಃ ಪರಿಶೀಲಿಸಲಾಗಿ ಹಾಗೂ ಗುಪ್ತವಾರ್ತಾ ವಿಭಾಗದಿಂದ ಸಂಗ್ರಹಿಸಿದ ಮಾಹಿತಿಯಿಂದ ಸಾಕಷ್ಟು ಸತ್ಯಾಂಶವಿದೆ ಎಂದು ತಿಳಿದುಬಂದಿರುತ್ತದೆ. 2024ನೇ ಸಾಲಿನ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟಾಗದಂತೆ ಅಹಿತಕರ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದ ಈ ಕೆಳಕಂಡ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅವುಗಳ ಮುಂದೆ ನಮೂದಿಸಲಾದ ದಿನಾಂಕಗಳು ಮತ್ತು ಸಮಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಮನಗಂಡಿರುತ್ತೇನೆ. ದಿನಾಂಕ: 06-09-2024 ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಾಡಿಸಿ ಈ ಕೆಳಕಂಡಂತೆ ಪರಿಷ್ಕತ ಆದೇಶವನ್ನು
ಹೊರಡಿಸಲಾಗಿದೆ ಎಂದಿದ್ದಾರೆ.
ಈ ದಿಸೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ. 163 ರ ಉಪ ಕಲಂ (1) ಮತ್ತು (3) ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಿ.ದಯಾನಂದ, ಭಾ.ಪೊ.ಸೇ. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ, ನಾನು ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಈ ಕೆಳಕಂಡ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅವುಗಳ ಮುಂದೆ ನಮೂದಿಸಲಾದ ದಿನಾಂಕಗಳು ಮತ್ತು ಸಮಯದಲ್ಲಿ CL-4 & CL6A ಪರವಾನಗಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಬಾರ್ & ರೆಸ್ಟೋರೆಂಟ್‌ಗಳು, ವೈನ್ ಶಾಪ್‌ಗಳು, ಪಬ್‌ಗಳು, ಎಂ.ಎಸ್.ಐ.ಎಲ್. ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ಮಾಡದಿರಲು ನಿಷೇಧಾಜ್ಞೆಯನ್ನು ವಿಧಿಸಿರುತ್ತೇನೆ. ( ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸೇವೆಗಳಿಗೆ ಮಾತ್ರ ಏನಾಯಿತಿ ನೀಡಲಾಗಿರುತ್ತದೆ) ಎಂದು ಹೇಳಿದ್ದಾರೆ.
ಈ ಏರಿಯಾಗಳಲ್ಲಿ ನಾಳೆ, ನಾಡಿದ್ದು ಎಣ್ಣೆ ಸಿಗಲ್ಲ
- ಬೆಂಗಳೂರು ಉತ್ತರ ವಿಭಾಗ – ಜೆಸಿ ನಗರ, ಆರ್ ಟಿ ನಗರ, ಹೆಬ್ಬಾಳ, ಸಂಜಯನಗರ ವ್ಯಾಪ್ತಿಯಲ್ಲಿ ದಿನಾಂಕ 14-09-2024ರಂದು ಬೆಳಿಗ್ಗೆ 6 ರಿಂದ ದಿನಾಂಕ 15-09-2024ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
- ಬೆಂಗಳೂರು ಪೂರ್ವ ವಿಭಾಗ – ಡಿಜೆ ಹಳ್ಳಿ, ಭಾರತಿ ನಗರ, ಪುಲಕೇಶಿನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ ಹಾಗೂ ಹಲಸೂರು ವ್ಯಾಪ್ತಿಯಲ್ಲಿ ದಿನಾಂಕ 15-09-2024ರಂದು ಬೆಳಿಗ್ಗೆ 6 ರಿಂದ ದಿನಾಂಕ 16-09-24ರ ಬೆಳಿಗ್ಗೆ 6 ಗಂಟೆಯವರೆಗೆ ಎಣ್ಣೆ ಮಾರಾಟ ಬಂದ್ ಮಾಡಲು ಆದೇಶಿಸಲಾಗಿದೆ.
- ಬೆಂಗಳೂರು ಈಶಾನ್ಯ ವಿಭಾಗ – ಯಲಹಂಕ ಉಪನಗರ, ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ದಿನಾಂಕ 15-09-2024ರಂದು ಬೆಳಿಗ್ಗೆ 6 ಗಂಟೆಯಿಂದ ದಿನಾಂಕ 16-09-2024ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಶೀಘ್ರವೇ ನಂದಿನಿ ಹಾಲಿನ ದರ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ | Nandini Milk Price Hike