ಮಂಡ್ಯ : ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಗಲಾಟೆ ನಡೆದ ನಾಗಮಂಗಲಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಗಮಂಗಲ ಪಟ್ಟಣಕ್ಕೆ ಭೇಟಿ ನೀಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ನಿನ್ನೆ ಗಲಭೆ ನಡೆದಿದ್ದ ಸ್ಥಳದಲ್ಲ ಪರಿಶೀಲನೆ ನಡೆಸಿದ್ದಾರೆ. ಸುಟ್ಟು ಹೋಗಿರುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗಮಂಗಲದ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಮಾಜಿ ಸಿಎಂ , ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದ ಗಲಾಟೆ ನೋಡಿದ್ರೆ ಪೂರ್ವನಿಯೋಜಿತ ಕೃತ್ಯ ಎನಿಸುತ್ತದೆ. ಮಸೀದಿ ಬಳಿ 10 ನಿಮಿಷ ಡ್ಯಾನ್ಸ್ ಮಾಡಲು ಬಿಟ್ಟವರು ಯಾರು? ಪೊಲೀಸರು ಏನು ಮಾಡುತ್ತಿದ್ದರು? ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಿತ್ತು. ಡಾ.ಪರಮೇಶ್ವರ್ ಅವರು ಇದನ್ನು ಸಣ್ಣ ಘಟನೆ ಎಂದು ಹೇಳುತ್ತಾರೆ. ಇದನ್ನು ನೋಡಿದರೆ ನಾಗಮಂಗಲದ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಅನಿಸುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.