ಬೆಂಗಳೂರು : ರಾಜ್ಯದ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆಗೆ ಹಗಲಿರುಳು, ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಲಿ ಇರುವ ಪೊಲೀಸ್ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಅರಣ್ಯ ಭವನದಲ್ಲಿಂದು ರಾಷ್ಟ್ರೀಯ ಹುತಾತ್ಮರ ದಿನದ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿದ ತರುವಾಯ ಮಾತನಾಡಿದ ಅವರು, ಕಾಡ್ಗಿಚ್ಚು ನಂದಿಸುವಾಗ, ಮಾನವ-ವನ್ಯಜೀವಿ ಸಂಘರ್ಷ ತಡೆಯುವ ಸಂದರ್ಭದಲ್ಲಿ ಮತ್ತು ಒತ್ತುವರಿದಾರರು ಮತ್ತು ಕಾಡುಗಳ್ಳರ ಆಕ್ರೋಶಕ್ಕೆ ಗುರಿಯಾಗಿ ಈವರೆಗೆ 61 ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ಎಲ್ಲರ ಕುಟುಂಬದೊಂದಿಗೆ ಇಲಾಖೆ ನಿಂತಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹುತಾತ್ಮರ ಕುಟುಂಬಕ್ಕೆ ಪರಿಹಾರ ನೀಡುವ ಘೋಷಣೆ ಮಾಡಿದರು, 30 ಲಕ್ಷ ರೂ. ಇದ್ದ ಪರಿಹಾರದ ಮೊತ್ತವನ್ನು ಈಗ ೫೦ ಲಕ್ಷಕ್ಕೆ ಹೆಚ್ಚಿಸುವ ಕಾರ್ಯವನ್ನೂ ಅವರೆ ಮಾಡಿದ್ದಾರೆ ಎಂದರು.
ನಮ್ಮ ಸರ್ಕಾರ ಅರಣ್ಯದಲ್ಲಿ ಜೀವದ ಹಂಗು ತೊರೆದು ಆನೆ ಕಾರ್ಯಪಡೆ, ಕಳ್ಳಬೇಟಿ ನಿಗ್ರಹ ಶಿಬಿರ ಮತ್ತು ಇತರ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರಿಗೂ ಮಾಸಿಕ 2 ಸಾವಿರ ರೂ. ಕಷ್ಟ ಕಾರ್ಯ ಭತ್ಯೆ ನೀಡುವ ಘೋಷಣೆ ಮಾಡಿದ್ದು, ಇದನ್ನು ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ 16 ತಿಂಗಳ ಅವಧಿಯಲ್ಲಿ ಅರಣ್ಯ ಇಲಾಖೆ ಸುಮಾರು 10 ಸಾವಿರ ಎಕರೆ ಭೂಮಿಯನ್ನು ಅಧಿಸೂಚಿತ ಅರಣ್ಯ ಎಂದು ಘೋಷಿಸಿದೆ. ಜೊತೆಗೆ ಬೆಂಗಳೂರು, ಕೋಲಾರ, ಬೀದರ್ ಸೇರಿದಂತೆ ರಾಜ್ಯದ ವಿವಿಧೆಡೆ ಸಾವಿರಾರು ಕೋಟಿ ರೂ ಬೆಲೆ ಬಾಳುವ 2500 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಮರು ವಶಕ್ಕೆ ಪಡೆದಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
2015ಕ್ಕೆ ಮೊದಲು ಅಂದರೆ ರಾಜ್ಯ ಸರ್ಕಾರದ ನಡವಳಿಗೆ ಮೊದಲು ಪಟ್ಟಾ ಜಮೀನು ಮತ್ತು ಅರಣ್ಯ ಭೂಮಿ ಒತ್ತುವರಿ ಸೇರಿ 3 ಎಕರೆ ಮೀರದ ಪ್ರಕರಣಗಳಲ್ಲಿ ಮತ್ತು ಅರಣ್ಯ ಹಕ್ಕು ಕಾಯಿದೆಯ ಅರ್ಜಿ ವಿಲೇವಾರಿ ಆಗದ ಪ್ರಕರಣಗಳ ಹೊರತಾಗಿ ದೊಡ್ಡ ಅರಣ್ಯ ಒತ್ತುವರಿ ತೆರವು ಮಾಡಿಸಲು ಸ್ಪಷ್ಟ ಆದೇಶ ನೀಡಲಾಗಿದೆ. ಇದು ಸಂವಿಧಾನದ ೪೧ (ಎ) ಮತ್ತು ೫೧ (ಎ) ಆಶಯಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದರು.
ಕಸ್ತೂರಿ ರಂಗನ್ ವರದಿ: ಮಾಸಾಂತ್ಯದೊಳಗೆ ರಾಜ್ಯದ ಅಭಿಪ್ರಾಯ ಸಲ್ಲಿಕೆ
ಪಶ್ಚಿಮಘಟ್ಟ ಹಲವು ನದಿಗಳ ಮೂಲವಷ್ಟೇ ಅಲ್ಲದೆ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ, ಪಕ್ಷಿ ಸಂಕುಲದ ನೆಲೆಯಾಗಿದೆ. ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಇದೇ ೧೯ರಂದು ಪಶ್ಚಿಮಘಟ್ಟ ವ್ಯಾಪ್ತಿಯ ಬಾಧ್ಯಸ್ಥರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ, ನಂತರ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ನಂತರ ಸಚಿವ ಸಂಪುಟದ ಅನುಮೋದನೆ ಪಡೆದು, ಪಶ್ವಿಮಘಟ್ಟದ ಜೀವವೈವಿಧ್ಯ, ಜನರ ಜೀವನೋಪಾಯ ಎರಡೂ ಇರುವ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದ ನಿಲುವು ತಿಳಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಕಾರ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ದೀಕ್ಷಿತ್ ಮತ್ತಿತರರು ಭಾಗವಹಿಸಿದ್ದರು.
BREAKING: ‘ದೆಹಲಿ-NCR’ನಲ್ಲಿ 5.8 ತೀವ್ರತೆಯ ಭೂಕಂಪನ: ಬೆಚ್ಚಿ ಬಿದ್ದ ಜನರು | Delhi-NCR earthquake
ಮುಂದಿನ ಮೂರು ಮುಕ್ಕಾಲು ವರ್ಷ ‘ಸಿದ್ಧರಾಮಯ್ಯ’ ಅವರೇ ಮುಖ್ಯಮಂತ್ರಿ: ಸಚಿವ ಈಶ್ವರ್ ಖಂಡ್ರೆ