ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮೀಣ ಪ್ರದೇಶದ ಲಕ್ಷಾಂತರ ಫಲಾನುಭವಿಗಳಿಗೆ ಪಿಎಂ ಆವಾಸ್ ಯೋಜನೆಯ ಮೊದಲ ಕಂತುಗಳನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು 26 ಲಕ್ಷ ಫಲಾನುಭವಿಗಳ ‘ಗೃಹ ಪ್ರವೇಶ’ ಸೆಪ್ಟೆಂಬರ್ 15 ರಂದು ಜೆಮ್ಶೆಡ್ಪುರದಲ್ಲಿ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಪ್ರಕಟಿಸಿದ್ದಾರೆ.
ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಆನ್ಲೈನ್ ಸಭೆಯನ್ನುದ್ದೇಶಿಸಿ ಮಾತನಾಡಿದ ಚೌಹಾಣ್, ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷಾಂತರ ಪಿಎಂ ಆವಾಸ್ ಯೋಜನೆ (ಪಿಎಂಎವೈ) ಫಲಾನುಭವಿಗಳಿಗೆ 2,745 ಕೋಟಿ ರೂ.ಗಳ ಕಂತುಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಜಾರ್ಖಂಡ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 10 ಲಕ್ಷ ಫಲಾನುಭವಿಗಳು ತಮ್ಮ ಮೊದಲ ಕಂತುಗಳನ್ನು ಪಡೆಯಲಿದ್ದಾರೆ. 2024-25ರ ಆರ್ಥಿಕ ವರ್ಷಕ್ಕೆ ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಸ್ವೀಕಾರ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಲಿದ್ದಾರೆ ಮತ್ತು ಲಕ್ಷಾಂತರ ಜನರು ಆನ್ ಲೈನ್ ನಲ್ಲಿ ಸೇರಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಮಾರ್ಚ್ 2024 ರ ವೇಳೆಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದ್ದು, ಅದರಲ್ಲಿ ಬಹುತೇಕ ಎಲ್ಲಾ ಮನೆಗಳನ್ನು ಅನುಮೋದಿಸಲಾಗಿದೆ ಮತ್ತು 2.65 ಕೋಟಿ ಮನೆಗಳು ಪೂರ್ಣಗೊಂಡಿವೆ ಎಂದು ಚೌಹಾಣ್ ಹೇಳಿದರು.
2023-24 ಮತ್ತು 2024-25ರ ಆರ್ಥಿಕ ವರ್ಷದಲ್ಲಿ ಈವರೆಗೆ ಮನೆಗಳನ್ನು ಪೂರ್ಣಗೊಳಿಸಿದ 26 ಲಕ್ಷ ಫಲಾನುಭವಿಗಳ ಹೊಸ ಮನೆಗೆ ಸ್ಥಳಾಂತರಗೊಳ್ಳುವಾಗ ನಡೆಸುವ ಸಾಂಪ್ರದಾಯಿಕ ಸಮಾರಂಭವಾದ ‘ಗೃಹ ಪ್ರವೇಶ’ ಸಹ ಅದೇ ದಿನ ನಡೆಯಲಿದೆ ಎಂದು ಅವರು ಹೇಳಿದರು.