ಬೆಂಗಳೂರು: ರಾಜ್ಯದಲ್ಲಿ ಅನರ್ಹತೆಯನ್ನು ಹೊಂದಿದ್ದರೂ ಬಿಪಿಎಲ್ ಕಾರ್ಡ್ ಪಡೆದಿರುವಂತವರಿಗೆ ಬಿಗ್ ಶಾಕ್ ಎನ್ನುವಂತೆ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವ ಕೆ.ಹೆಚ್ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದಂತ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು, ರಾಜ್ಯದಲ್ಲಿ ಶೇ.80ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಎಪಿಎಲ್ ಕಾರ್ಡ್ ದಾರರು ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಅರ್ಹರಲ್ಲದವರೂ ಪಡೆದಿರುವುದು ತಿಳಿದಿದೆ. ಅರ್ಹ ಫಲಾನುಭವಿಗಳ ಹೊರತಾಗಿ, ಅನರ್ಹರಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಕ್ರಮ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರ ಪತ್ತೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಈ ಪೈಕಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರು, 10,04,716 ಮಂದಿ 1.20 ಲಕ್ಷ ರೂ.ಗಳ ಅಧಿಕ ಆದಾಯ ಹೊರಂದಿರುವವರು, 4,036 ಮಂದಿ ಸರ್ಕಾರಿ ನೌಕರರಿರುವುದು ಪತ್ತೆಯಾಗಿದೆ. ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು, ಮನೆಗಳನ್ನು ಬಾಡಿಗೆ ಕೊಟ್ಟಿರುವವರು, 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ.