ನವದೆಹಲಿ : ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಹತ್ವ ಪಡೆದುಕೊಂಡಿದೆ.
ಮೂಲಗಳ ಪ್ರಕಾರ ಬಜರಂಗ್ ಪುನಿಯಾ ಅವರಿಗೆ ವಿಧಾನಸಭೆ ಟಿಕೆಟ್ ಸಿಗಬಹುದು. ಇದಲ್ಲದೇ ವಿನೇಶ್ ಫೋಗಟ್ ಕೂಡ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ವಿನೇಶ್ ದಾದ್ರಿ ವಿಧಾನಸಭೆಯಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿದ್ದವು. ಈ ಚರ್ಚೆಗಳ ನಡುವೆ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ಆಗಸ್ಟ್ 27, 2024 ರಂದು, ಹರಿಯಾಣದ ಜಿಂದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ವಿನೇಶ್ ಫೋಗಟ್ ಅವರು ರಾಜಕೀಯಕ್ಕೆ ಸೇರುವ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಿರಿಯರೊಂದಿಗೆ ಸಮಾಲೋಚಿಸುವುದಾಗಿಯೂ ಹೇಳಿದ್ದರು.
ಮೂಲಗಳ ಪ್ರಕಾರ, ಬಜರಂಗ್ ಪುನಿಯಾ ಅವರು ಕಾಂಗ್ರೆಸ್‌ನಿಂದ ಬದ್ಲಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ಕಾಂಗ್ರೆಸ್‌ನಲ್ಲಿ ಈಗಾಗಲೇ ಹಾಲಿ ಶಾಸಕರಿರುವುದರಿಂದ, ಬಜರಂಗ್‌ಗೆ ಬಹದ್ದೂರ್‌ಗಢ ಮತ್ತು ಭಿವಾನಿ ಆಯ್ಕೆಯನ್ನು ನೀಡಲಾಗಿದೆ. ಕುಲದೀಪ್ ವಾಟ್ಸ್ ಬದ್ಲಿ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಸ್ತುತ ಶಾಸಕರಾಗಿದ್ದಾರೆ. ಬ್ರಾಹ್ಮಣರಿರುವ ಈ ಪ್ರದೇಶದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಕಾಂಗ್ರೆಸ್ ಬಯಸುವುದಿಲ್ಲ, ಹೀಗಾಗಿ ಬ್ರಾಹ್ಮಣ ನಾಯಕ ಕುಲದೀಪ್ ವತ್ಸ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಇದರೊಂದಿಗೆ, ಭಜರಂಗ್ ಪುನಿಯಾಗೆ ರಾಜ್ಯದ ಯಾವುದೇ ಜಾಟ್ ಪ್ರಾಬಲ್ಯದ ಪ್ರದೇಶದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ.