ಬೆಂಗಳೂರು : “ಐದು ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಗ್ಯಾರಂಟಿಗಳನ್ನು ನೀಡಿದ್ದು ಚುನಾವಣೆಗಲ್ಲ. ಜನರ ಬದುಕಿನಲ್ಲಿ ಬದಲಾವಣೆ ತರಲು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಶಿವಾಜಿನಗರದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕರ್ನಾಟಕವನ್ನು ಹಸಿವು, ಬಡತನ ಮತ್ತು ಅಸಮಾನತೆ ಮುಕ್ತ ರಾಜ್ಯ ಮಾಡಬೇಕೆಂಬುದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗುರಿ” ಎಂದರು.
“ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ ಪಾಟೀಲರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಭಾವನೆಗೆ ಕೆಲಸ ಮಾಡುತ್ತಿಲ್ಲ. ಬದುಕಿಗಾಗಿ ಮಾಡುತ್ತಿದೆ. ರಾಜ್ಯದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5 ಸಾವಿರ ಹಣ ಉಳಿಸುತ್ತಿದ್ದೇವೆ” ಎಂದರು.
ಹೆಲ್ತ್ ಟೂರಿಸಂಗೆ ಕರ್ನಾಟಕ ಹೆಸರಾಗುತ್ತಿದೆ
“ನಮ್ಮ ರಾಜ್ಯದಲ್ಲಿ 70 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಸುಮಾರು 1 ಸಾವಿರಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ಕಾಲೇಜುಗಳಿವೆ. ದೇಶದ ಯಾವ ರಾಜ್ಯಗಳಲ್ಲೂ ಇಲ್ಲದ ವೈದ್ಯಕೀಯ ಶಿಕ್ಷಣ ಸೌಲಭ್ಯ ನಮ್ಮಲ್ಲಿದೆ. ವಿದೇಶಗಳಿಂದ ಜನರು ಬಂದು ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕ ಹೆಲ್ತ್ ಟೂರಿಸಂಗೆ ಹೆಸರಾಗುತ್ತಿದೆ” ಎಂದರು.
“ಈ ಆಸ್ಪತ್ರೆಗೆ ಇನ್ಪೋಸಿಸ್ ಅವರು 10 ಕೋಟಿ ಸಿಎಸ್ ಆರ್ ಅನುದಾನ ನೀಡಿದ್ದಾರೆ. ನನ್ನ ಕನಕಪುರ ಕ್ಷೇತ್ರದಲ್ಲಿಯೂ ತಾಯಿ, ಮಗು ಆಸ್ಪತ್ರೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಆರೋಗ್ಯ ಕ್ಷೇತ್ರ ಮಾತ್ರವಲ್ಲ ಶಿಕ್ಷಣ ಕ್ಷೇತ್ರದಲ್ಲಿ ಸಿಎಸ್ ಆರ್ ಅನುದಾನ ಬಳಸಿಕೊಂಡು ಈ ವರ್ಷ 500 ಶಾಲೆಗಳನ್ನು ಪಂಚಾಯಿತಿ ಮಟ್ಟದಲ್ಲಿ ಕಟ್ಟಲಾಗುವುದು. ಒಟ್ಟು 2 ಸಾವಿರ ಶಾಲೆಗಳ ನಿರ್ಮಾಣ ನಮ್ಮ ಸರ್ಕಾರ ಗುರಿ” ಎಂದು ತಿಳಿಸಿದರು.
“ನಮ್ಮ ಯೋಜನೆಗಳ ಫಲದಿಂದ ರಾಜ್ಯದ ಜನರು ನಮ್ಮ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಅಚಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಹದೇವಪುರದ ಜನರು ಕಡಿಮೆ ಮತ ನೀಡಿರಬಹುದು. ಆದರೆ ಶಿವಾಜಿನಗರದ ಜನತೆ ಅತಿ ಹೆಚ್ಚು ಮತ ನೀಡಿದ್ದಾರೆ. ನಿಮ್ಮ ಋಣವನ್ನು ತೀರಿಸಲಾಗುವುದು” ಎಂದರು.
“ದೇಶದ ಮಹಾನ್ ಋಷಿ ಚರಕ ಮಹರ್ಷಿಯ ಹೆಸರನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಡಲಾಗಿದೆ. ಇತ್ತೀಚೆಗೆ ದಿನೇಶ್ ಗುಂಡೂರಾವ್ ಅವರ ಕ್ಷೇತ್ರದ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ನೂತನ ತಾಯಿ, ಮಗು ಆಸ್ಪತ್ರಗೆ ಗುದ್ದಲಿ ಪೂಜೆ ಮಾಡಲಾಯಿತು. ಜನರ ಆರೋಗ್ಯ ರಕ್ಷಣೆಗೆ ಸಾಕಷ್ಟು ಕೆಲಸವನ್ನು ಸರ್ಕಾರ ಮಾಡಲಿದೆ” ಎಂದರು.
“ಶಿವಾಜಿನಗರದ ಜನತೆ ಸಜ್ಜನ, ವಿದ್ಯಾವಂತ, ದೂರದೃಷ್ಟಿ ಹೊಂದಿರುವ ಯುವ ನಾಯಕನಾದ ರಿಜ್ವಾನ್ ಆರ್ಷದ್ ಅವರನ್ನು ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರಮುಖ ವಿಧಾನಸಭಾ ಕ್ಷೇತ್ರದಿಂದ ಇವರನ್ನು ಜನರು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಬೆಂಗಳೂರಿಗಾಗಿ ಯಾವುದೇ ಕಾರ್ಯಕ್ರಮ ಮಾಡಿದರೂ ಆ ಸಮಿತಿಗೆ ರಿಜ್ವಾನ್ ಅವರನ್ನು ಸೇರಿಸಿಕೊಂಡು ಮಾಡಲೇಬೇಕು” ಎಂದರು.
“ಶಿವಾಜಿನಗರ ಕ್ಷೇತ್ರ ರಿಜ್ವಾನ್ ಅವರ ನೇತೃತ್ವದಲ್ಲಿ ಮಿಕ್ಕ ಯಾವ ಕ್ಷೇತ್ರಗಳಿಗೂ ಕಡಿಮೆ ಇಲ್ಲದಂತೆ ಅಭಿವೃದ್ದಿ ಹೊಂದುತ್ತಿದೆ. ನೀವುಗಳು ನಮ್ಮ ಕ್ಷೇತ್ರ ಹಿಂದುಳಿದಿದೆ ಎಂದು ಕೊರಗುವುದನ್ನು ರಿಜ್ವಾನ್ ತಪ್ಪಿಸಿದ್ದಾರೆ. ಗ್ರೇಟರ್ ಬೆಂಗಳೂರು ವಿಧೇಯಕ ಪರಿಶೀಲನೆ ಮತ್ತು ವರದಿಗಾಗಿ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರಿಝ್ವಾನ್ ಆರ್ಶದ್ ಅವರನ್ನು ನೇಮಕ ಮಾಡಲಾಗಿದೆ” ಎಂದು ಹೇಳಿದರು.
ಗಮನಿಸಿ: ಎರ್ನಾಕುಲಂ-ಯಲಹಂಕ-ಎರ್ನಾಕುಲಂ ನಡುವೆ ವಿಶೇಷ ರೈಲು ಸಂಚಾರ ಆರಂಭ | South Western Railway
BREAKING: ‘ಹೋಂ ಸ್ಟೇ’ ಸೇರಿ ಎಲ್ಲಾ ‘ಅರಣ್ಯ ಒತ್ತುವರಿ’ ತೆರವುಗೊಳಿಸಿ: ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ
BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!