ಬೆಂಗಳೂರು: ಬೆಸ್ಕಾಂ ಗ್ರಾಹಕರಿಗೆ ಬಿಗ್ ಶಾಕ್ ಎನ್ನುವಂತೆ ನಾಳೆಯಿಂದ ಹೊಸ ನಿಯಮ ಜಾರಿಗೊಳ್ಳುತ್ತಿದೆ. ಈ ನಿಯಮದ ಅನುಸಾರ ರೂ.100 ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೂ ಸಂಪರ್ಕ ಕಡಿತಗೊಳ್ಳಲಿದೆ.
ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.
ಸೆಪ್ಟೆಂಬರ್ 1ರಿಂದ ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಲು ನಿರ್ಧರಿಸಿರುವ ಬೆಸ್ಕಾಂ- ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಮೀಟರ್ ರೀಡಿಂಗ್‌ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಎಂದು ಬೆಸ್ಕಾಂ ಪ್ರಕಟಣೆ ಕೋರಿದೆ.
ಈವರೆಗೆ, ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್ ಮಾಪನ ಮಾಡಿದ ಬಳಿಕ, ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಲೈನ್‌ಮೆನ್‌ಗಳ ಜತೆ ಮಾಪಕ ಓದುಗರು ಮತ್ತೆ ಅದೇ ಸ್ಥಳಕ್ಕೆ ತೆರಳುತ್ತಿದ್ದರು. ಇನ್ನು ಮುಂದೆ ಮಾಪಕ ಓದುಗರೊಂದಿಗೆ ಇರುವ ಲೈನ್‌ಮೆನ್‌ಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸರಬರಾಜನ್ನು ಬಿಲ್ ನೀಡುವ ಸಮಯದಲ್ಲೇ ಸ್ಥಗಿತಗೊಳಿಸಲಿದ್ದಾರೆ.
ವಿದ್ಯುತ ಬಿಲ್ ಪಾವತಿಗೆ ಅಂತಿಮ ದಿನಾಂಕದವರೆಗೆ (ಅಂದರೆ ಬಿಲ್ ನೀಡಿದ 15 ದಿನಗಳು) ಯಾವುದೇ ಬಡ್ಡಿಯಿಲ್ಲದೆ 15 ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ದಿನಾಂಕದ ನಂತರವೂ ಬಡ್ಡಿಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದಾಗ್ಯೂ ಗ್ರಾಹಕರು ಬಿಲ್ ಪಾವತಿಸದಿದ್ದಲ್ಲಿ ಮುಂದಿನ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂ.ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.