ಚನ್ನಪಟ್ಟಣ : “ನೀವು ನಮ್ಮ ಕೈ ಬಲಪಡಿಸಿ, ನಾವು ನಿಮ್ಮ ಋಣ ತೀರಿಸುತ್ತೇವೆ. ನಾವು ನಿಮ್ಮನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೆಳಕೆರೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣದ ಶಂಕುಸ್ಥಾಪನೆ ಬಳಿಕ ಗ್ರಾಮಸ್ಥರನ್ನು ಉದ್ದೇಶಿಸಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.
“ನಾವು ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ ಎಂಬ ಕಾರಣಕ್ಕೆ ರಾಜ್ಯದ ಜನ ನಮಗೆ 135 ಸೀಟು ಕೊಟ್ಟು ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ನಿಮ್ಮ ಊರಿನಲ್ಲಿ ಸಣ್ಣಪುಟ್ಟ ಶುಭ ಕಾರ್ಯಕ್ರಮ ನಡೆಸಲು ಸಮುದಾಯಭವನ ಬೇಕು ಎಂದು ಕೇಳಿಕೊಂಡರು. ಅದಕ್ಕಾಗಿ ನಾವು ಬಂದು ಇಂದು ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ. ಈ ಭಾಗದ ನಾಲ್ವರು ವಿಧಾನ ಪರಿಷತ್ ಸದಸ್ಯರು ತಲಾ 15 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ. ಉಳಿದ ಅನುದಾನದ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದರು.
“ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತು. 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ, ಬಸ್ ನಲ್ಲಿ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆ ನೀಡುತ್ತಿದ್ದೇವೆ. ಹೆಣ್ಣು ಕುಟುಂಬದ ಕಣ್ಣು, ಕಷ್ಟವೋ ಸುಖವೋ ಹೆಣ್ಣು ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ. ಈ ಕಾರಣಕ್ಕೆ ನಾವು ಮಹಿಳೆಯರಿಗೆ ಹೆಚ್ಚಿನ ನೆರವಾಗುವ ಯೋಜನೆ ಜಾರಿ ಮಾಡಿದ್ದೇವೆ” ಎಂದರು.
ಯಾರೇ ನಿಂತರೂ ನಾನೇ ಅಭ್ಯರ್ಥಿ:
“ಸಧ್ಯದಲ್ಲೇ ಚುನಾವಣೆ ಬರಲಿದೆ. ಇಲ್ಲಿ ಶಾಸಕ ಸ್ಥಾನ ಖಾಲಿ ಇದೆ. ನಾವು ಯಾರನ್ನೇ ಇಲ್ಲಿ ನಿಲ್ಲಿಸಿದರೂ ನಾನೇ ಅಭ್ಯರ್ಥಿ. ಕಾರಣ ನಾನೇ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸುತ್ತೇನೆ. ನಿಮ್ಮ ಮತ ನನಗೆ ಬೀಳಲಿದೆ. ಇಂದು ನಡೆದ ಉದ್ಯೋಗ ಮೇಳದಲ್ಲಿ 8 ಸಾವಿರ ಯುವಕರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ತಾಲೂಕಿನ ಎಲ್ಲಾ ಊರುಗಳಲ್ಲಿ ಯಾವ ಯಾವ ಕೆಲಸಗಳಾಗಬೇಕು ಎಂದು ಕೇಳಿದ್ದೇವೆ. 22 ಸಾವಿರ ಮಂದಿ ತಮ್ಮ ಸಮಸ್ಯೆಗಳ ನಿವಾರಣೆಗೆ ಅರ್ಜಿ ನೀಡಿದ್ದು, ಆ ಪೈಕಿ 9 ಸಾವಿರ ಜನ ನಿವೇಶನ ಹಾಗೂ ಮನೆ ಬೇಕು ಎಂದು ಕೇಳಿದ್ದಾರೆ” ಎಂದು ತಿಳಿಸಿದರು.
ತಾಲೂಕಿನ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ:
“ಪಕ್ಕದ ಊರುಗಳಲ್ಲಿ, ಚನ್ನಪಟ್ಟಣದ ಸುತ್ತಮುತ್ತ ಅನೇಕ ಜಮೀನುಗಳನ್ನು ಖರೀದಿ ಮಾಡಿ ಲೇಔಟ್ ಮಾಡಿ ಬಡವರಿಗೆ ನಿವೇಶನ ನೀಡಲಾಗುವುದು. ಇಲ್ಲೂ ಜಾಗ ಇದ್ದರೆ ಹೇಳಿ, ಇಲ್ಲೂ ಖರೀದಿ ಮಾಡಿ ನಿವೇಶನ ನೀಡುತ್ತೇವೆ. ಇನ್ನು ವಸತಿ ಇಲಾಖೆಯಿಂದ ಈ ತಾಲೂಕಿನ 5 ಸಾವಿರ ಬಡವರಿಗೆ ಮನೆ ನೀಡಲಾಗುವುದು. ಈ ತಾಲೂಕಿನ ಅಭಿವೃದ್ಧಿಗೆ ನಮ್ಮ ಸರ್ಕಾರ 150 ಕೋಟಿ ರೂ. ಅನುದಾನ ನೀಡಿದೆ. ನೀರಾವರಿ ಯೋಜನೆಗಳಿಗೂ ಅನುದಾನ ನೀಡಲಾಗಿದೆ. ಸರಿಸುಮಾರು 500 ಕೋಟಿಯಷ್ಟು ಅನುದಾನದ ಯೋಜನೆಗಳನ್ನು ಈ ತಾಲೂಕಿಗೆ ನೀಡಿದ್ದೇವೆ” ಎಂದು ತಿಳಿಸಿದರು.
ಅಧಿಕಾರ ಇದ್ದಾಗ ಅವರು ಈ ಕೆಲಸ ಮಾಡಲಿಲ್ಲ:
“ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ಈ ರೀತಿ ಕೆಲಸಗಳನ್ನು ಮಾಡಬೇಡಿ ಎಂದು ನಾವು ಹೇಳಿದ್ದೆವಾ? ಯಾರನ್ನೂ ನಾವು ತಡೆದಿರಲಿಲ್ಲ. ಅವರಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಆದರೂ ಮಾಡಲಿಲ್ಲ. ಈಗ ಇಲ್ಲಿ ಕುರ್ಚಿ ಖಾಲಿ ಇದೆ. ನಾವು ಬಂದು ಕೆಲಸ ಮಾಡುತ್ತಿದ್ದೇವೆ. ಖಾಲಿ ಇರುವ ಚೇರಿನಲ್ಲಿ ನಾವು ಕೂರಬೇಕೋ ಬೇಡವೋ? ನಮ್ಮ ಸರ್ಕಾರವನ್ನು ಯಾರೂ ತೆಗೆಯಲು ಸಾಧ್ಯವಿಲ್ಲ. ನಾವು ನಿಮ್ಮ ಕೆಲಸ ಮಾಡಿಕೊಡುತ್ತೇವೆ. ದೇವರ ಸನ್ನಿಧಿಯಲ್ಲಿ ಈ ಮಾತು ನೀಡುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಯಾರೋ ಬಂದರು ಏನೋ ಹೇಳಿದರು ಎಂಬುದನ್ನು ಕೇಳದೆ, ನೀವು ನಮಗೆ ಬೆಂಬಲ ನೀಡಿ. ನಾವು ನಿಮ್ಮ ಜತೆ ಇರುತ್ತೇವೆ” ಎಂದು ಭರವಸೆ ನೀಡಿದರು.
ನಮ್ಮ ಹೆಸರು ಉಳಿಸಿಕೊಳ್ಳಲು ಜಿಲ್ಲೆಗೆ ಮರುನಾಮಕರಣ:
“ನಾವು ನಿಮ್ಮನ್ನು ಬಿಟ್ಟು ಓಡಿ ಹೋಗುವುದಿಲ್ಲ. ನಾವೆಲ್ಲರೂ ಮೂಲತಃ ಬೆಂಗಳೂರಿನವರು. ಈ ಹಿಂದೆ ನಾವು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿದ್ದವರು ಈಗ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದರೆ ತಪ್ಪೇನು? ನಿಮ್ಮ ಮನೆಯಲ್ಲಿರುವ ಹಳೇ ದಾಖಲೆಗಳನ್ನು ನೋಡಿ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಇದೆ. ಈ ಹೆಸರನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಇದರಿಂದ ಈ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ. ಈ ಭಾಗದಲ್ಲಿ ಕೈಗಾರಿಕೆ ಬಂದರೆ ಇಲ್ಲಿಂದಲೇ ಬೆಳಗ್ಗೆ ಕೆಲಸಕ್ಕೆ ಹೋಗುತ್ತಾರೆ, ಸಂಜೆ ವಾಪಸ್ ಬರುತ್ತಾರೆ. ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಬೆಂಗಳೂರು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದರು.
ಸಾರ್ವಜನಿಕರ ಗಮನಕ್ಕೆ: ಗ್ಯಾರಂಟಿ ಯೋಜನೆಗಳ ಸಹಾಯವಾಣಿ ಸಂಖ್ಯೆ ‘BBMP ವ್ಯಾಪ್ತಿ’ಗೆ ಮಾತ್ರ ಸೀಮಿತ
ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ಸೆ.14ರವರೆಗೆ ಶೇ.5ರ ರಿಯಾಯಿತಿ ವಿಸ್ತರಣೆ
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays