ಬೆಳಗಾವಿ : ಹಿಂದುಳಿದ ಸಮುದಾಯದವರು ಸಿಎಂ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಗೋಕಾಕ ತಾಲೂಕಿನ ಕೌಜಲಗಿಯಲ್ಲಿ ಆಯೋಜಿಸಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ರಾಯಣ್ಣನ ಕೋಟೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,
ಹಿಂದುಳಿದ ಸಮುದಾಯದವರು ಸಿಎಂ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ. ಅದಕ್ಕೇ ಯಾವುದೇ ತಪ್ಪಿಲ್ಲದಿದ್ದರೂ ನನ್ನ ವಿರುದ್ಧ ಭಾರಿ ಷಡ್ಯಂತ್ರ ರಚಿಸಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಷಡ್ಯಂತ್ರ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
ರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ ಅತ್ಯಂತ ಪರಾಕ್ರಮಿ. ಬ್ರಿಟೀಷರು ರಾಣಿ ಚನ್ನಮ್ಮನ ಆಸ್ಥಾನದ ಮೇಲೆ ದಾಳಿ ನಡೆಸಿದಾಗ ರಾಯಣ್ಣನ ಹೋರಾಟದಿಂದ, ಶೌರ್ಯದಿಂದ ಗೆಲುವು ಸಾಧ್ಯವಾಯಿತು. ಎರಡನೇ ಯುದ್ಧದಲ್ಲಿ ಸೋಲಾದರೂ ಬ್ರಿಟೀಷರ ಕೈಗೆ ಸಿಗದೆ ತಪ್ಪಿಸಿಕೊಂಡ ರಾಯಣ್ಣ ಗೆರಿಲ್ಲಾ ಸೈನ್ಯ ಕಟ್ಟಿ, ಗೆರಿಲ್ಲಾ ಯುದ್ಧ ಮಾಡಿ ಬ್ರಿಟೀಷರಿಗೆ ಚಳ್ಳೆಹಣ್ಣು ತಿನ್ನಿಸಿದರು. ಇದರಿಂದ ಬ್ರಿಟೀಷರು ನೆಮ್ಮದಿ ಕೆಡಿಸಿಕೊಂಡಿದ್ದರು. ಆದರೆ ನಮ್ಮವರೇ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟರು. ನಮ್ಮವರ ದೇಶದ್ರೋಹದಿಂದ ರಾಯಣ್ಣ ಬ್ರಿಟೀಷರ ವಶವಾದರು. ರಾಯಣ್ಣ ಈಜಾಡುವಾಗ ಅವರ ಕೈಯಲ್ಲಿ ಆಯುಧ ಇರುವುದಿಲ್ಲ. ಈ ವೇಳೆ ಅವರನ್ನು ಬಂಧಿಸುವುದು ಸುಲಭ ಎಂದು ಬ್ರಿಟೀಷರಿಗೆ ಉಪಾಯ ಕೊಟ್ಟು ಬಂಧನಕ್ಕೆ ಕಾರಣರಾದವರು ನಮ್ಮವರೇ.
ಇಂಥಾ ದೇಶದ್ರೋಹಿಗಳು ನಮ್ಮಲ್ಲೇ ಇದ್ದಾರೆ. ಈ ಬಿಜೆಪಿಯವರು ನನ್ನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಷಡ್ಯಂತ್ರ ಮಾಡುತ್ತಲೇ ಇದ್ದಾರೆ. ಆದರೆ ಎಲ್ಲಿಯವರೆಗೂ ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ಈ ಸಿದ್ದರಾಮಯ್ಯನನ್ನು ಕೆಳಗಿಳಿಸಲು ಸಾಧ್ಯವಿಲ್ಲ.
ಹಿಂದುಳಿದ ಸಮುದಾಯದವರು ಸಿಎಂ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ. ಅದಕ್ಕೇ ಯಾವುದೇ ತಪ್ಪಿಲ್ಲದಿದ್ದರೂ ನನ್ನ ವಿರುದ್ಧ ಭಾರಿ ಷಡ್ಯಂತ್ರ ರಚಿಸಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಷಡ್ಯಂತ್ರ ಗೆಲ್ಲುವುದಿಲ್ಲ ಎಂದಿದ್ದಾರೆ.