ಹುಬ್ಬಳ್ಳಿ: ಮುಡಾ ಹಗರಣ ಮರೆಮಾಚಲು ಮುಖ್ಯಮಂತ್ರಿ ದೆಹಲಿಯಲ್ಲಿ ಶಾಸಕರ ಪೇರೇಡ್ ಮಾಡಲು ತಯಾರಿ ಮಾಡುತಿದ್ದು ದೆಹಲಿಯಲ್ಲಿ ಏನೇ ಪೇರೇಡ್ ಮಾಡಲಿ ಬಿಡಲಿ ಅವರಿಗೆ ಬಿಟ್ಟಿದ್ದು ಈಗಾಗಲೇ ಕಾನೂನು ಹೋರಾಟ ಆರಂಭ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಚಂಡು ಕಾನೂನು ಅಂಗಳಕ್ಕೆ ಹೋಗಿದ್ದು ಕಾನೂನಿನ ಮೂಲಕವೇ ಇದು ಇತ್ಯರ್ಥ ಆಗಬೇಕು ಏನೇಲ್ಲಾ ಬೆಳವಣಿಗೆ ಆಗುತ್ತವೆ ನೋಡಬೇಕು ಹೈಕೋರ್ಟ್ ನಲ್ಲಿ ಏನು ತೀರ್ಮಾನ ಆಗುತ್ತದೆ ನೋಡಿಕೊಂಡು ಅದರ ಮೇಲೆ ಮುಂದಿನ ಹೋರಾಟ ನಡೆಸಲಾಗುವುದು. ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ರಾಜಕೀಯ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಂದಾಲ್ ಗೆ ಕಡಿಮೆ ದರಕ್ಕೆ ಜಮೀನು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಅಧಿಕಾರ ಇದ್ದಾಗ ಒಂದು ವಿರೋಧ ಪಕ್ಷದಲ್ಲಿ ಇದ್ದಾಗ ಒಂದು ರೀತಿ ನಡೆದುಕೊಳ್ಳುವ ಮೂಲಕ ಎರಡು ನಾಲಿಗೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದು ಸಚಿವ ಸಂಪುಟದಲ್ಲಿ ಸಹ ವಿರೋಧ ವ್ಯಕ್ತವಾಗಿದ್ದು ಇದರ ಜೊತೆಗೆ ಇದು ಸಾರ್ವಜನಿಕವಾಗಿ ಸಹ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಇದಕ್ಕೆ ವಿರೋಧ ಬಂದಾಗ ನಾವು ಸಹ ಸಚಿವ ಸಂಪುಟದಲ್ಲಿ ಹಿಂದೆ ಪಡೆದುಕೊಂಡೆವು ಆದರೆ, ಆಗ ಇದೇ ಕಾಂಗ್ರೆಸ್ ನವರು ಇದಕ್ಕೆ ಭಾರೀ ವಿರೋಧ ಮಾಡಿದ್ದರು. ಈಗ ಇವರೇ ಪರಭಾರೆ ಮಾಡಲು ಹೊರಟಿದ್ದಾರೆ. ವಿರೋಧ ಪಕ್ಷದದಲ್ಲಿ ಇದ್ದಾಗ ಒಂದು ರೀತಿ ನಡೆದುಕೊಳ್ಳತ್ತಿದ್ದಾರೆ. ಆಡಳಿತದಲ್ಲಿ ಇದ್ದಾಗ ಒಂದು ರೀತಿ ನಡೆದುಕೊಳ್ಳತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಕೆಲವು ಮಸೂದೆಗಳಿಗೆ ಸ್ಪಷ್ಟೀಕರಣ ಕೇಳಿ ವಾಪಾಸ್ ಕಳುಹಿಸಿದ ಕುರಿತು ಸರ್ಕಾರ ವಿರೋಧ ವ್ಯಕ್ತಪಡಿಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಮಸೂದೆಗೆ ರಾಜ್ಯಪಾಲರು ವಿರೋಧ ವ್ಯಕ್ತಪಡಿಸಿಲ್ಲ ಯಾವುದೇ ರೀತಿಯಲ್ಲಿ ರಾಜ್ಯಪಾಲರು ಉದ್ದೇಶ ಪೂರ್ವಕವಾಗಿ ನಡೆದುಕೊಂಡಿಲ್ಲ. ಪ್ರತಿಯೊಂದು ಮಸೂದೆಗೆ ಪ್ರಶ್ನೆ ಕೇಳಿದ್ದಾರೆ . ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾದ ಮಸೂದೆಗಳಿಗೆ ಉತ್ತರ ಕೊಡಿ ಎಂದು ಕೇಳಿದ್ದಾರೆ. ಸಾರ್ವಜನಿಕ ಅನುಕೂಲವಾಗದ ಮಸೂದೆಗೆ ತಡೆಹಿಡಿಯುವ ಅಧಿಕಾರ ರಾಜ್ಯಪಾಲರಿಗೆ ಇದ್ದು, ಇಷ್ಟೇ ಅಲ್ಲಾ ಮುಂದೆ ರಾಷ್ಟ್ರಪತಿಗಳಿಗೆ ಸಹ ಕಳುಹಿಸಿ ಕೊಡುವ ಅಧಿಕಾರ ಇದೆ ಇದು ರಾಜ್ಯಪಾಲರು ಹಾಗೂ ಸರಕಾರ ನಡುವೆ ಇರುವ ವ್ಯವಹಾರ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ: NC ಜೊತೆಗಿನ ಮೈತ್ರಿಯ ಬಗ್ಗೆ ಬಿಜೆಪಿ ಟೀಕೆಗೆ ಕಾಂಗ್ರೆಸ್ ತಿರುಗೇಟು