ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ವಿಷಕಾರಿ ಆಹಾರ ಸೇವಿಸಿ ಒಂದೇ ಕುಟುಂಬದ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರಲ್ಲಿ ಐವರು ಸಹೋದರಿಯರು ಮತ್ತು 4 ರಿಂದ 18 ವರ್ಷದೊಳಗಿನ ಮೂವರು ಸಹೋದರರು ಸೇರಿದ್ದಾರೆ. ಖೈರ್ಪುರ್ ಜಿಲ್ಲೆಯ ಪೀರ್–ಜೋ–ಗೋತ್ ಬಳಿಯ ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಇಲ್ಲಿ, 10 ಸದಸ್ಯರ ಕುಟುಂಬ ಮತ್ತು ಅವರ ಅತಿಥಿಗಳು ಊಟ ಮಾಡಿದ ತಕ್ಷಣ ಮೂರ್ಛೆ ಹೋಗಲು ಪ್ರಾರಂಭಿಸಿದರು. ಅವರ ಸಂಬಂಧಿಕರು ಮತ್ತು ನೆರೆಹೊರೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರಿಲ್ಲದ ಕಾರಣ, ಅವರ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸದೆ ಅವರ ಕುಟುಂಬಗಳಿಗೆ ಹಿಂದಿರುಗಿಸಲಾಯಿತು. ಆಸ್ಪತ್ರೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂತ್ರಸ್ತರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದ್ದರೆ, ಇಷ್ಟು ಸಾವುಗಳು ಸಂಭವಿಸುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.