ಬೆಂಗಳೂರು: ರಾಜ್ಯಪಾಲರು ಬಿಜೆಪಿ ಏಜೆಂಟರು ಎಂಬುದಾಗಿ ಪದವೀಧರರ ಘಟಕ, ಕೆಪಿಸಿಸಿ, ಹಾಗೂ ಮುಖ್ಯ ವಕ್ತಾರರಾದಂತ ಎ.ಎನ್ ನಟರಾಜ್ ಗೌಡ ಅವರು ಕಿಡಿಕಾರಿದ್ದಾರೆ.
ಸಾಂವಿಧಾನಿಕ ಪ್ರಜ್ಞೆಯ ಸಂಕೇತವಾಗಿದ್ದ ರಾಜ್ಯಪಾಲರನ್ನು ಮತ್ತವರು ಕಾರ್ಯನಿರ್ವಹಿಸುವ ರಾಜಭವನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ಪಕ್ಷ ಮತ್ತು ಸರ್ಕಾರದ ಏಜಂಟರನ್ನಾಗಿ ಮಾಡಿಕೊಂಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಜನಾಭಿಪ್ರಾಯ ಮತ್ತು ಜನತಂತ್ರಗಳ ಭಾಗವಾಗಿ ದೇಶಾದ್ಯಂತ ಗೆದ್ದು ಬಂದಿರುವ ತಮಗೆ ರುಚಿಸದ ಸರ್ಕಾರಗಳನ್ನು ಅದರ ಮುಖ್ಯಮಂತ್ರಿಗಳನ್ನು ಕ್ಷುಲ್ಲಕ ಕಾರಣಗಳ ಮೂಲಕ ದಮನಿಸುವ ಬಿ.ಜೆ.ಪಿ ಕಾರ್ಯಸೂಚಿ ಪ್ರಜಾಪ್ರಭತ್ವಕ್ಕೆ ನಾರಕ ಎಂಬುದಯ ಈಗ ಜಗಜ್ಜಾಹಿರಾಗಿದೆ. ಇದಕ್ಕೆ ಕನ್ನಡ ನಾಡಿನ ನೆಲ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ಕೆಪಿಸಿಸಿ ಪದವಿಧರರ ವಿಭಾಗದ ರಾಜ್ಯ ಅಧ್ಯಕ್ಷರಾದ ಎ.ಎನ್.ನಟರಾಜ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ಧದ ಗಣಿ ಹಗರಣದ ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆ ಕಳೆದ 10 ತಿಂಗಳ ಹಿಂದೆಯೇ ರಾಜ್ಯಪಾಲರಿಗೆ ಅನುಮತಿ ಕೋರಿತ್ತು. ಅದೂ ಸಾಲದೆಂಬಂತೆ ಹಿಂದಿನ ಸರ್ಕಾರದ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ವಿರುಧ್ಧದ ದೂರು ಕೂಡ ಇತ್ಯರ್ಥಪಡಿಸದೇ ಹಾಗೇ ಉಳಿಸಿಕೊಂಡಿರುವ ಮಾನ್ಯ ರಾಜ್ಯಪಾಲರು, ಕೇವಲ ಮುಖ್ಯಮಂತ್ರಿ ಸಿಧ್ದರಾಮಯ್ಯನವರ ವಿರುಧ್ದ ಬಂದ ದೂರಿನ ಬಗ್ಗೆಯಷ್ಟೆ ವಿಶೇಷ ಆಸಕ್ತಿ ವಹಿಸಿರುವುದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ.
ಹೆಚ್. ಡಿ.ಕುಮಾರಸ್ವಾಮಿ ಸೇರಿದಂತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಮೇಲಿರುವ ಗುರುತರ ದೂರುಗಳ ವಿರುದ್ಧ ತನಿಖೆ ನಡೆಸಲು ಕೋರಿದ್ದ ಕಡತವನ್ನ ರಾಜ್ಯಪಾಲರು ಮೂಲೆಗೆ ತಳ್ಳಿದ್ದಾರೆ ಎಂಬುದನ್ನು ರಾಜಭವನದ ಅವರ ಕೊಠಡಿಯಲ್ಲಿ ಕೊಳೆಯುತ್ತಿರುವ ಕಡತಗಳೇ ಸಾಕ್ಷೀಕರಿಸುತ್ತಿವೆ. ಹೀಗೆ ತನಿಖೆಗಾಗಿ ಕಾಯುತ್ತಿರುವ ಕಡತಗಳನ್ನು ವಿಲೇವಾರಿ ಮಾಡುವುದು ಬಿಟ್ಟು ರಾಜ್ಯಪಾಲರು, ಸಿದ್ದರಾಮಯ್ಯನವರ ಮೇಲೆ ಬೆಳಿಗ್ಗೆ ನೀಡಿದ ದೂರಿಗೆ ಅವತ್ತು ಸಂಜೆಯೇ ಶರಾ ಬರೆದು ಕಡತ ವಿಲೇವಾರಿಗೆ ಇನ್ನಿಲ್ಲದ ಆಸಕ್ತಿ ವಹಿಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ರಾಜ್ಯಪಾಲರ ಇಂತಹ ನಡೆಯು ಸಾಂವಿಧಾನಿಕ ಹುದ್ದೆಯ ಅಪಮೌಲ್ಯೀಕರಣದ ಜೊತೆಗೆ ಅದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ ಎಂದು ಎ.ಎನ್.ನಟರಾಜಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಮೂಡ’ ಪ್ರಕರಣದ ವಿರುಧ್ದ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರನ್ನು ಪರಾಮರ್ಶೆಗೆ ಒಳಪಡಿಸಿದರೆ, ದೂರಿನ ಹಿಂದಿನ ರಾಜಕಾರಣ ಸರಳವಾಗಿ ಅರ್ಥವಾಗುತ್ತದೆ. ನ್ಯಾಯಾಲಯದಿಂದಲೇ ಛೀಮಾರಿ ಹಾಕಿಸಿಕೊಂಡಿರುವ ವ್ಯಕ್ತಿ ನೀಡಿದ ದೂರನ್ನು ಆಧರಿಸಿ, ಮಾನ್ಯ ರಾಜ್ಯಪಾಲರು ರಾತ್ರೋರಾತ್ರಿ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸುತ್ತಾರೆ. ಒಂದರ್ಥದಲ್ಲಿ ರಾಜ್ಯಪಾಲರು, ದೇಶದ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ದೂರು ಪ್ರಕರಣಗಳಿಗಿಂತಲೂ ವೇಗವಾಗಿ ಪ್ರಕರಣ ದಾಖಲಿಸಿಕೊಂಡು ಅಷ್ಟೇ ವೇಗದಲ್ಲಿ ಪ್ರಕರಣದ ತನಿಖೆಯನ್ನು ಮುಗಿಸಲು ರಾಜಭವನವನ್ನು ‘ತ್ವರಿತ ನ್ಯಾಯಾಲಯ’ ಆಗಿ ಪರಿವರ್ತಿಸುವ ಆಸೆ ಹೊಂದಿದ್ದಾರೆ ಎನ್ನುವ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ ಎಂದು ಎ.ಎನ್.ನಟರಾಜ್ ಗೌಡ ರಾಜ್ಯಪಾಲರ ನಡೆಗೆ ವ್ಯಂಗ್ಯವಾಡಿದ್ದಾರೆ.
ಇಂಥವೆಲ್ಲ ರಾಜಕೀಯ ಹಿನ್ನೆಲೆಯ ಪ್ರಕರಣಗಳ ಹೊರತಾಗಿ ರಾಜ್ಯಪಾಲರು ನಿರ್ವಹಿಸುವ ಕೆಲಸ ಕಾರ್ಯಗಳು ಬಹಳಷ್ಟಿವೆ. ನಾಡಿನ ಜನಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಪರಸ್ಥಿತಿ ಸುಧಾರಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರದ ಮೂಲಕ ಅಗತ್ಯ ಉತ್ತೇಜನಗಳನ್ನು ದೊರಕಿಸಿಕೊಡಲು ಸೇತುವೆಯಾಗಿ ರಾಜ್ಯಪಾಲರು ಕೆಲಸ ಮಾಡಬೇಕಿರುತ್ತದೆ. ಇಂತಹ ನ್ಯಾಯ ಸಮ್ಮತ ಮತ್ತು ಸಂವಿಧಾನದ ಆಶಯಗಳ ಪರವಾಗಿ ಇರಬೇಕಿದ್ದ ರಾಜ್ಯಪಾಲರು, ಒಂದು ಪಕ್ಷ ದ ನೇತೃತ್ವದ ಸರ್ಕಾರದ ಏಜಂಟರಾಗಿ, ಚುನಾಯಿತ ಸರ್ಕಾರದ ಅಸ್ಥಿರತೆಗೆ ಪ್ರಯತ್ನಿಸುವುದು ಅವರು ಕುಳಿತಿರುವ ಹುದ್ದೆಯ ಘನತೆಗೆ ತಕ್ಕುದಾದದ್ದಲ್ಲ. ಈ ಕೂಡಲೇ ಮಾನ್ಯ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಕರ್ನಾಟಕದ ರಾಜ್ಯಪಾಲರ ಸಂವಿಧಾನ ಬಾಹಿರ ಕೃತ್ಯವನ್ನು ಪರಿಗಣಿಸಿ ಅವರನ್ನು ರಾಜ್ಯಪಾಲರ ಹುದ್ದೆಯಿಂದ ವಜಾಗೊಳಿಸಬೇಕೆಂದು ಅಗ್ರಹಪಡಿಸುತ್ತೇನೆ ಎಂದು ಎ.ಎನ್.ನಟರಾಜ್ ಗೌಡ ಒತ್ತಾಯಿಸಿದ್ದಾರೆ.
ಸಿಎಂ ಸಿದ್ಧಾರಮಯ್ಯ ವಿರುದ್ಧದ ಮುಡಾ ಹಗರಣ: ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ
BREAKING : ಪ್ರಾಸಿಕ್ಯೂಷನ್ ಗೆ ಅನುಮತಿ : `CM ಸಿದ್ದರಾಮಯ್ಯ’ ಬೆನ್ನಿಗೆ ನಿಂತ ಕುರುಬ ಸಮುದಾಯ