ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದೆ. ಈ ಬೆನ್ನಲ್ಲೇ ಸರ್ಕಾರಿ ನೌಕರರ ಮತ್ತೊಂದು ಬೇಡಿಕೆಯಾದಂತ ಹಳೆ ಪಿಂಚಣಿ ಯೋಜನೆ ( Old Pension Scheme-OPS ) ಜಾರಿಗೊಳಿಸೋದಕ್ಕೆ ಪರಿಶೀಲನಾ ಸಮಿತಿಯನ್ನು ರಚಿಸಿ ಆದೇಶಿಸಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅರುಳ್ ಕುಮಾರ್ ಅವರು ನಡವಳಿಯನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ( National Pension Scheme – NPS ) ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ರಚಿಸಿರುವಂತ ಸಮಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಸಮಿತಿಯ ಸದಸ್ಯರನ್ನಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾದಂತ ಅಮಲಾನ್ ಆದಿತ್ಯ ಬಿಸ್ವಾಸ್, ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ವಿಶಾಲ್.ಆರ್ ಹಾಗೂ ಆರ್ಥಿಕ ಇಲಾಖೆಯ ವೆಚ್ಚ ವಿಭಾಗದ ಸರ್ಕಾರದ ಕಾರ್ಯದರ್ಶಿ ಡಾ.ಎಂ.ಟಿ ರೇಜು ಅವರನ್ನು ನೇಮಿಸಲಾಗಿದೆ.
ಈ ಮೇಲ್ಕಂಡ ಸಮಿತಿಗೆ ಈಗಾಗಲೇ ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಿರುವ ಬಗ್ಗೆ ಕೈಗೊಂಡಿರುವಂತ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಇದಷ್ಟೇ ಅಲ್ಲದೇ ತನ್ನದೇ ಆದ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವಲ್ಲಿ ಸಕ್ಷಮವಾಗಿರುತ್ತದೆ. ಸಮಿತಿಯ ಪರಿಶೀಲನೆಗೊಳಪಟ್ಟ ಅಂಶಗಳಿಗೆ ಅಗತ್ಯವೆನಿಸಿದ ಮಾಹಿತಿಗಳನ್ನು ಒದಗಿಸಲು ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಸಿದ್ಧರಾಮಯ್ಯಗೆ ಮುಡಾ ಸಂಕಷ್ಟ: ಭಂಡತನ ಬಿಟ್ಟು ರಾಜೀನಾಮೆ ಕೊಡಿ- BY ವಿಜಯೇಂದ್ರ ಆಗ್ರಹ
BREAKING : ಪ್ರಾಸಿಕ್ಯೂಷನ್ ಗೆ ಅನುಮತಿ : `CM ಸಿದ್ದರಾಮಯ್ಯ’ ಬೆನ್ನಿಗೆ ನಿಂತ ಕುರುಬ ಸಮುದಾಯ