ಬೆಂಗಳೂರು : “ಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಕಾಂಗ್ರೆಸ್ ಜನಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಬುಧವಾರ ಮಾತನಾಡಿದರು.
“ಇಂದಿರಾ ಗಾಂಧಿ ಅವರು ವೃದ್ಧಾಪ್ಯ, ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರ ಪಂಪ್ ಸೆಟ್ ಗೆ 10 ಹೆಚ್.ಪಿ ಉಚಿತ ವಿದ್ಯುತ್, ಕೃಷ್ಣ ಅವರ ಕಾಲದಲ್ಲಿ ಸ್ತ್ರೀಶಕ್ತಿ ಸಂಘ ಯೋಜನೆ ಜಾರಿಗೆ ಬಂದಿತು. ಇದರಲ್ಲಿ ಯಾವುದಾದರೂ ಒಂದು ಯೋಜನೆಯನ್ನು ನಿಲ್ಲಿಸಲಾಗಿದೆಯೇ? ಬಡವರಿಗೆ ನಿವೇಶನ, ಮನೆ ನೀಡುವ ಯೋಜನೆ ನಿಂತಿದೆಯೇ? ಇಲ್ಲ. ಅದೇ ರೀತಿ ಬಿಜೆಪಿಯವರು ನೂರು ಜನ್ಮ ತಳೆದರೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ” ಎಂದು ವಾಗ್ದಾಳಿ ನಡೆಸಿದರು.
“ಪದ್ಮನಾಭನಗರದಲ್ಲಿ ನಮ್ಮ ಕಾರ್ಯಕರ್ತರ ಹುಮ್ಮಸ್ಸು, ಶಕ್ತಿ ಸ್ಫೂರ್ತಿ ನೋಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನಮ್ಮ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನಮ್ಮ ಈ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಂದಿದ್ದು ಯಾಕೆ? ಇವುಗಳ ಅವಶ್ಯಕತೆ ಏನು ಎಂಬುದು ಪ್ರಮುಖವಾದ ವಿಚಾರವಾಗಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ರಾಜಕಾರಣ ಎಂದ ಮೇಲೆ ಗೆಲುವು, ಸೋಲು ಇರುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಜನರ ಬದುಕಿನ ಬಗ್ಗೆ ಆಲೋಚಿಸುತ್ತದೆ. ಜನರ ಬದುಕು ಕಟ್ಟುವ ಕೆಲಸ ಮಾಡುತ್ತದೆ. ಬಿಜೆಪಿಯವರು ದೇವರು, ಧರ್ಮ, ಜಾತಿ ಆಧಾರವಾಗಿ, ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ” ಎಂದು ತಿಳಿಸಿದರು.
“ನಾವು ದೇವರ ಬಳಿ ಹೋಗಿ, ವಿದ್ಯೆ, ಆರೋಗ್ಯ, ನೆಮ್ಮದಿ, ಆರ್ಥಿಕ ಸುಧಾರಣೆ ಬಯಸಿ ಪ್ರಾರ್ಥಿಸುತ್ತೇವೆ. ಇದರಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಾರೆ. ಆದರೆ ನಾವು ನೀವು ದೇವರಲ್ಲಿ ಯಾವುದು ಬೇಕು ಎಂದು ಪ್ರಾರ್ಥನೆ ಮಾಡುತ್ತೀರೋ ಅದನ್ನು ನೀಡಲು ಕಾರ್ಯಕ್ರಮ ರೂಪಿಸುತ್ತೇವೆ. ನಿಮ್ಮ ಮನೆಯ ಜ್ಯೋತಿ ಬೆಳಗಲಿ ಎಂದು 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಸುಮಾರು 1.50 ಕೋಟಿ ಮನೆಗಳು ವಿದ್ಯುತ್ ಬಿಲ್ ಕಟ್ಟುತ್ತಿಲ್ಲ. ಬಡ ಕುಟುಂಬದ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಲು ಮುಂದಾದಾಗ, ಅತ್ತೆ ಸೊಸೆ ಮಧ್ಯೆ ಜಗಳ ತಂದಿಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡಿದವು. ಯಾರ ಮನೆಯಲ್ಲಾದರೂ ಅತ್ತೆ ಸೊಸೆ ಈ ವಿಚಾರಕ್ಕೆ ಜಗಳ ಆಡಿದ್ದಾರಾ? ಈ ಯೋಜನೆ ಹಣ ಒಂದು ತಿಂಗಳು ಹೆಚ್ಚು ಕಮ್ಮಿಯಾಗಿ ಬಂದಿರಬಹುದು. ಆದರೆ ಕಳೆದ ಒಂದು ವರ್ಷದಲ್ಲಿ ಬಹುತೇಕ ಹಣ ಬಂದಿದೆ. ಇನ್ನು ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಅಕ್ಕಿ, 5 ಕೆ.ಜಿ ಅಕ್ಕಿ ಹಣ ನೀಡುತ್ತಿದ್ದೇವೆ” ಎಂದರು.
“ಇನ್ನು ದುಡಿಯುವ ಮಹಿಳೆಯರು ಕೆಲಸಕ್ಕೆ ಹೋಗುವಾಗ ಬಸ್ ಪ್ರಯಾಣ ದರದ ಹೊರೆಯನ್ನು ಇಳಿಸಲು ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ದೇವಾಲಯ, ಸಂಬಂಧಿಕರ ಮನೆಗೆ ಹೋಗಲು ಅನುಕೂಲವಾಗಿದೆ. ಇನ್ನು ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇಂತಹ ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದಾದರೂ ಒಂದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ನೀಡಿದ್ದಾರಾ? ಯಡಿಯೂರಪ್ಪ, ಸದಾನಂದ ಗೌಡರು, ಜಗದೀಶ್ ಶೆಟ್ಟರ್, ಬೊಮ್ಮಾಯಿ, ಆರ್.ಅಶೋಕ್ ಅವರು ಕೊಟ್ಟಿದ್ದಾರಾ? ಜೆಡಿಎಸ್ ಅವಧಿಯಲ್ಲಿ ನೀಡಿದ್ದಾರೆಯೇ?” ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಬಿಜೆಪಿಯವರೂ ಈ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಿದ್ದರೆ ಅಶೋಕ್ ಅವರು ತಮ್ಮ ಕಾರ್ಯಕರ್ತರಿಗೆ ಹೇಳಿ ಈ ಗ್ಯಾರಂಟಿ ಯೋಜನೆ ಪ್ರಯೋಜನ ಪಡೆಯದಂತೆ ಸಲಹೆ ನೀಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಸಂವಿಧಾನವೇ ನೀಡಿದೆ. ವಿರೋಧ ಪಕ್ಷದ ನಾಯಕರ ಕ್ಷೇತ್ರದಿಂದಲೇ ಈ ಗ್ಯಾರಂಟಿ ಯೋಜನೆಗಳ ಸಮಿತಿಯನ್ನು ಕಚೇರಿ ಉದ್ಘಾಟನೆ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಚಾಲನೆ ನೀಡಲಾಗುವುದು” ಎಂದು ತಿಳಿಸಿದರು.
“ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಹೀಗಾಗಿ ಪ್ರಮೋದ್ ಹಾಗೂ ಅವರ ತಂಡದವರಿಗೆ ಒಂದು ಮಾತು ಹೇಳುತ್ತಿದ್ದೇನೆ. ನೀವು ಕ್ಷೇತ್ರದಲ್ಲಿ ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ, ಇಲ್ಲವೇ? ಎಂದು ಪರಿಶೀಲನೆ ಮಾಡಬೇಕು. ಜನರ ವಿಶ್ವಾಸ ಗಳಿಸಬೇಕು” ಎಂದು ಕಿವಿ ಮಾತು ಹೇಳಿದರು.
“ಮನುಷ್ಯನಿಗೆ ನಂಬಿಕೆ ಮುಖ್ಯ. ನಮ್ಮ ಕೆಲಸ ಬಡವರಿಗೆ ಅನುಕೂಲವಾಗುತ್ತದೆ ಎಂದು ನಾವು ನಂಬಿದ್ದೇವೆ. ಲೋಕಸಭೆ ಚುನಾವಣೆಯೇ ಬೇರೆ, ವಿಧಾನಸಭಾ ಕ್ಷೇತ್ರ ಚುನಾವಣೆಯೇ ಬೇರೆ. ಪಾಲಿಕೆ ಚುನಾವಣೆಯೂ ಮುಂದಿನ ದಿನಗಳಲ್ಲಿ ನಡೆಯಲಿದೆ. ಮುಂದೆ ನಿಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಇರಲಿ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನೀವು ದಿನ ಬೆಳಗಾದರೆ ಕೈನಲ್ಲಿ ದೇವರನ್ನು ಕಾಣುತ್ತಾ ಪ್ರಾರ್ಥನೆ ಮಾಡುತ್ತೀರಿ. ದುಡಿಮೆಯ ಶಕ್ತಿ ಈ ಕೈ. ಇಂದಿರಾ ಗಾಂಧಿ ಅವರು ಕೊಟ್ಟ ಈ ಕೈಯನ್ನು ಸುಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡಿದ್ದೇವೆ. ರಾಜ್ಯಮಟ್ಟದಲ್ಲಿ ಹೆಚ್.ಎಂ ರೇವಣ್ಣ ಅವರ ಅಧ್ಯಕ್ಷತೆ ಹಾಗೂ ಐವರು ಉಪಾಧ್ಯಕ್ಷರುಗಳ ಸಮಿತಿ ರಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಸಮಿತಿಗಳಲ್ಲಿ ಅಧ್ಯಕ್ಷರು ಹಾಗೂ 14 ಮಂದಿ ಸದಸ್ಯರ ಸಮಿತಿ ಮಾಡಲಾಗಿದೆ. ಅಧ್ಯಕ್ಷರುಗಳು ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾಗಿರುತ್ತಾರೆ. ಅವರು ಕ್ಷೇತ್ರ ಹಾಗೂ ತಾಲೂಕುಗಳಲ್ಲಿ ಹಾಗೂ ವಾರ್ಡ್ ಗಳಲ್ಲಿ ಕಚೇರಿ ನೀಡಲು ಆದೇಶ ನೀಡಿದ್ದೇವೆ” ಎಂದರು.
“ಜನರಿಗೆ ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ಈ ಐದು ಯೋಜನೆಗಳನ್ನು ಜಾರಿ ಮಾಡಲು ಈ ಸಮಿತಿ ರಚಿಸಲಾಗಿದೆ” ಎಂದು ತಿಳಿಸಿದರು.
ಮಾಧ್ಯಮಗಳ ವರದಿ ಸುಳ್ಳು
ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಬೇಕು ಎಂದು ಸಚಿವರು ಮನವಿ ಮಾಡಿರುವ ಬಗ್ಗೆ ಮಾಧ್ಯಮ ವರದಿ ಬಗ್ಗೆ ಗಮನ ಸೆಳೆದಾಗ, “ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು.ಪಕ್ಷದ ಅಧ್ಯಕ್ಷನಾದ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳನ್ನು ಬದಲಿಸುವ ಅಥವಾ ಕತ್ತರಿ ಹಾಕುವ ಉದ್ದೇಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಆದಾಯ ಹೆಚ್ಚಾಗಿರುವವರು, ತೆರಿಗೆ ಪಾವತಿದಾರರು ಕೂಡ ಈ ಯೋಜನೆ ಪಡೆಯುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ. ಅಂತಹ ಪ್ರಕರಣಗಳ ಪರಿಶೀಲನೆ ಮಾಡಲಾಗುವುದು. ಈ ಫಲಾನುಭವಿಗಳ ಗುರುತಿನ ಚೀಟಿ ವಿತರಣೆಗೆ ನಾವು ಆಲೋಚನೆ ನಡೆಸುತ್ತಿದ್ದೇವೆ. ನಮ್ಮ ಗ್ಯಾರಂಟಿ ಸಮಿತಿ ಈ ವಿಚಾರವಾಗಿ ಪರಿಶೀಲನೆ ಮಾಡಲಿದೆ. ನಮ್ಮ ಬಜೆಟ್ ನಲ್ಲಿ ಈ ಯೋಜನೆಗಳಿಗೆ 56 ಸಾವಿರ ಕೋಟಿ ರೂ. ಮೀಸಲಿಡಲಾಗಿದ್ದು, ಶಕ್ತಿ ಯೋಜನೆ ನಂತರ ಜನರ ಅನುಕೂಲಕ್ಕೆ ಸಾರಿಗೆ ಇಲಾಖೆ ಸಾವಿರಾರು ಹೊಸ ಬಸ್ ಖರೀದಿ ಮಾಡುತ್ತಿದೆ. ರಾಜ್ಯದಲ್ಲಿ ಬಸ್ ಪ್ರಯಾಣದ ಪ್ರಮಾಣ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಗಳ ಆದಾಯ ಹೆಚ್ಚಾಗಿದೆ” ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ನೀಡುವ ಅನುದಾನ ಕೊರತೆಯಾಗಿದೆ ಎಂದು ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಕೇಳಿದಾಗ, “ಅದೆಲ್ಲವೂ ಸುಳ್ಳು, ನಮ್ಮ ಸರ್ಕಾರ ಇಂತಹ ದೊಡ್ಡ ಯೋಜನೆ ಜಾರಿ ಮಾಡಿದ್ದಾರೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಅಸೂಯೆಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಯಾವ ಸಚಿವರು ಹೇಳಿಲ್ಲ. ಅದೆಲ್ಲವೂ ಸುಳ್ಳು. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ನಮ್ಮ ರಾಜ್ಯದ ಬಜೆಟ್ ಪ್ರಮಾಣ 26 ಸಾವಿರ ಕೋಟಿ ಇತ್ತು. ಈಗ ಅದು 3.71 ಲಕ್ಷ ಕೋಟಿಗೆ ಏರಿಕೆಯಾಗಿದೆ. ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಅನುದಾನವಿದೆ” ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ ಎಂದು ಕೇಳಿದಾಗ, “ಈ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿಯವರು ಪರಿಶೀಲನೆ ಮಾಡಿ ಸರಿಪಡಿಸಲಿದ್ದಾರೆ” ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆ ಬಳಿ ಜನಔಷಧಿ ಕೇಂದ್ರ ತೆರೆಯಲು ಅವಕಾಶವಿಲ್ಲ ಎಂಬ ವಿಚಾರವಾಗಿ ಕೇಳಿದಾಗ, “ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಸಚಿವರ ಜತೆ ಚರ್ಚಿಸಿ, ನಂತರ ಮಾತನಾಡುತ್ತೇನೆ” ಎಂದು ತಿಳಿಸಿದರು.
KSRTC ಬಸ್ಸಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ: 3,695 ಮಂದಿಯಿಂದ 6.03 ಲಕ್ಷ ದಂಡ ವಸೂಲಿ
‘ಆದಾಯ ತೆರಿಗೆ ಪಾವತಿ’ಯಿಂದ ಯುಐಡಿಎಐಗೆ ವಿನಾಯಿತಿ ನೀಡಿದ ‘ಹಣಕಾಸು ಸಚಿವಾಲಯ’ | Income Tax
ರಾಜ್ಯದ ರೈತರೇ ಗಮನಿಸಿ : ‘PM KISAN’ ಹಣ ಜಮಾ ಆಗಲು ಕೂಡಲೇ `e-KYC’ ಮಾಡಿಸಿಕೊಳ್ಳಿ!