ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನಗದು ಅಥವಾ ಅಕ್ಕಿಯ ಬದಲು ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿದಾರರಿಗೆ ಬೇಳೆಕಾಳುಗಳು, ಸಕ್ಕರೆ ಅಥವಾ ಅಡುಗೆ ಎಣ್ಣೆಯನ್ನು ವಿತರಿಸಲು ಸರ್ಕಾರ ಯೋಜಿಸುತ್ತಿದೆ ಎಂದು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಂಗಳವಾರ ಹೇಳಿದ್ದಾರೆ.
ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಗದು ನೀಡಲಾಗುತ್ತಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಶೇಕಡಾ 93 ರಷ್ಟು ಬಿಪಿಎಲ್ ಕಾರ್ಡ್ ಹೊಂದಿರುವವರು ಬೇಳೆಕಾಳುಗಳು, ಸಕ್ಕರೆ ಅಥವಾ ಅಡುಗೆ ಎಣ್ಣೆ ಪಡೆಯಲು ಒಲವು ತೋರಿದ್ದಾರೆ. ಆದ್ದರಿಂದ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ ಮುನಿಯಪ್ಪ, ಬಡವರಿಗೆ ವಿತರಿಸಲು ರಾಜ್ಯಕ್ಕೆ ಎಷ್ಟು ಅಕ್ಕಿ ಬೇಕಾದರೂ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
“ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ರಾಜ್ಯ ಸರ್ಕಾರವು ಅನ್ನಭಾಗ್ಯದಡಿ ಹೆಚ್ಚುವರಿ ಅಕ್ಕಿಯನ್ನು ಒದಗಿಸಿದರೆ, ಅದು ಫಲಾನುಭವಿಗಳಿಗೆ ತುಂಬಾ ಹೆಚ್ಚಾಗುತ್ತದೆ” ಎಂದು ಅವರು ಹೇಳಿದರು