ಬೆಂಗಳೂರು : “ಅಣೆಕಟ್ಟು ಸುರಕ್ಷತಾ ಸಮಿತಿ ರಚನೆ ಮಾಡಲಾಗುತ್ತಿದ್ದು, ಈ ಸಮಿತಿಯು ರಾಜ್ಯದ ಎಲ್ಲಾ ಅಣೆಕಟ್ಟುಗಳಿಗೆ ಭೇಟಿ ನೀಡಿ ಸುರಕ್ಷತೆಯ ಬಗ್ಗೆ ವರದಿ ನೀಡುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು “ಸಮಿತಿಯು ಎಲ್ಲಾ ಅಣೆಕಟ್ಟುಗಳ ಅಧ್ಯಯನ ನಡೆಸಿ ಮುಂದಿನ ಒಂದು ತಿಂಗಳ ಒಳಗಾಗಿ ವರದಿ ನೀಡುವುದು. ತುಂಗಾಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಕಾರ್ಯಕ್ಕೂ ಈ ಸಮಿತಿಗೂ ಸಂಬಂಧವಿಲ್ಲ. ಉಳಿದ ವಿಚಾರದ ಬಗ್ಗೆ ವರದಿ ತಯಾರಿಸಲಾಗುವುದು” ಎಂದು ತಿಳಿಸಿದರು.
“ಈಗಾಗಲೇ ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಕೆಲಸ ನಡೆಯುತ್ತಿದೆ. ತುಂಗಭದ್ರಾ ನೀರಾವರಿ ನಿಗಮ ನಮ್ಮೊಬ್ಬರ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ.ಕೇಂದ್ರ ಹಾಗೂ ಮೂರು ರಾಜ್ಯಗಳ ಸದಸ್ಯರು ಇದರಲ್ಲಿ ಇರುತ್ತಾರೆ. ಗೇಟ್ ಚೈನ್ ಕಿತ್ತು ಹೋದ ಪ್ರಕರಣದ ಬಗ್ಗೆ ಎಲ್ಲರಿಗೂ ತಕ್ಷಣ ಮಾಹಿತಿ ನೀಡಲಾಯಿತು. ಅಣೆಕಟ್ಟು ಸುರಕ್ಷತಾ ಸಮಿತಿಯಲ್ಲಿ ಈ ಮೊದಲೇ ಕೆಲಸ ಮಾಡಿದಂತಹ ತಂತ್ರಜ್ಞರು ಇದ್ದರು. ಅವರ ಬಳಿ ಚರ್ಚೆ ನಡೆಸಲಾಯಿತು. ನಂತರ ನಕ್ಷೆಯನ್ನು ತೆಗೆಸಿ ಅದರಂತೆ ಗೇಟ್ ತಯಾರಿಸುವವರ ಬಳಿ ಮಾತನಾಡಲಾಯಿತು. ನಾನೇ ಖುದ್ದಾಗಿ ಜಿಂದಾಲ್ ಕಾರ್ಖಾನೆಯವರ ಬಳಿ ಮಾತನಾಡಿದೆ. ಸೋಮವಾರ ಬೆಳಗಿನ ಜಾವದ ಹೊತ್ತಿಗೆ ಸಂಪೂರ್ಣ ತಂಡ ಬಂದು ಕೆಲಸ ಪ್ರಾರಂಭ ಮಾಡಿದೆ. 50-60 ಟಿಎಂಸಿ ನೀರನ್ನು ಉಳಿಸಲು, ರೈತರಿಗೆ ಒಂದು ಬೆಳೆಗಾದರೂ ನೀರು ಕೊಡಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದರು.
“ರೈತರು ಆತಂಕ ಪಡಬೇಕಾಗಿಡಲ್ಲ. ನದಿಗೆ ನೀರು ಹರಿದು ಹೋಗುವ ಬದಲು ಎಲ್ಲಾ ಚಾನಲ್ ಗಳನ್ನು ತೆರೆದು ಅಲ್ಲಿಗೂ ನೀರು ಹರಿಸಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಸುರಕ್ಷತೆವಹಿಸಲಾಗಿದೆ. ಆಂಧ್ರ, ತೆಲಂಗಾಣ ಹಾಗೂ ವಿರೋಧ ಪಕ್ಷದ ನಾಯಕರು ಭೇಟಿ ನೀಡುತ್ತೇವೆ ಎಂದು ತಿಳಿಸಿದ್ದರು. ಅವರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೆ. ಅಲ್ಲದೇ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಕೇಂದ್ರ ಸಚಿವರಾದ ಸೋಮಣ್ಣ ಅವರ ಬಳಿಯೂ ಮಾತನಾಡಿ ವರದಿ ಕಳಿಸಲಾಗಿದೆ” ಎಂದು ಹೇಳಿದರು.
“ತುಂಗಭದ್ರಾ ನೀರಾವರಿ ನಿಗಮದ ಅಧ್ಯಕ್ಷರಾದ ವೀರೇಂದ್ರ ಶರ್ಮ ಅವರಿಗೆ ಪತ್ರ ಬರೆಯಲಾಗಿದೆ. ಅದರಲ್ಲಿ ಪ್ರಸ್ತುತ ವಿಚಾರಗಳ ಬಗ್ಗೆ ತಿಳಿಸಲಾಗಿದೆ. ಮುಂದಕ್ಕೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಹೇಳಲಾಗಿದೆ” ಎಂದರು.
ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತೇ, ಇದರಲ್ಲಿ ಅಧಿಕಾರಿಗಳ ಲೋಪವಿದೆಯೇ ಎಂದು ಕೇಳಿದಾಗ “70 ವರ್ಷದ ಹಳೆಯ ತಂತ್ರಜ್ಞಾನ. ಎಲ್ಲಾ ಗೇಟ್ ಗಳು ಸರಿಯಿವೆ. ಇದೊಂದು ಮಾತ್ರ ಒತ್ತಡ ತಡೆಯಲಾರದೆ ಅವಘಡ ಸಂಭವಿಸಿದೆ. ಇದರಲ್ಲಿ ಅಧಿಕಾರಿಗಳ ತಪ್ಪೇನಿದೆ?” ಎಂದರು.
“ಈಗ ಒಬ್ಬರನ್ನೊಬ್ಬರು ದೂಷಣೆ ಮಾಡುವಂತಹ ಸಮಯವಲ್ಲ. ನೀರು ಹಾಗೂ ಅಣೆಕಟ್ಟು ಎರಡೂ ಉಳಿಯಬೇಕು. 70 ವರ್ಷದ ಹಳೆಯ ಅಣೆಕಟ್ಟಾದ ಕಾರಣ ಈ ಅವಘಡ ನಡೆದಿದೆ. ನಮ್ಮ ಬಳಿ ಎಲ್ಲಾ ನಕ್ಷೆ, ದಾಖಲೆಗಳು ಇದ್ದ ಕಾರಣಕ್ಕೆ ಬೇಗ ಕೆಲಸವಾಗುತ್ತಿದೆ” ಎಂದು ತಿಳಿಸಿದರು.
ಅಣೆಕಟ್ಟು ಸುರಕ್ಷತಾ ಸಮಿತಿ ಈ ಮೊದಲೇ ವರದಿ ನೀಡಿತ್ತು ಎನ್ನುವ ಬಗ್ಗೆ ಕೇಳಿದಾಗ “ಎಲ್ಲವೂ ಸುಳ್ಳು. ಯಾವ ವರದಿಯೂ ಬಂದಿಲ್ಲ. ಇತರೇ ಅಣೆಕಟ್ಟುಗಳಲ್ಲಿ ಎರಡು ರೀತಿಯ ನಿಯಂತ್ರಣ ವ್ಯವಸ್ಥೆಯಿರುತ್ತದೆ. ರೋಪ್ ಹಾಗೂ ಚೈನ್ ವ್ಯವಸ್ಥೆ. ಆಗಿನ ಕಾಲಸ ವಿನ್ಯಾಸದಂತೆ ಇಲ್ಲಿ ಚೈನ್ ವ್ಯವಸ್ಥೆ ಮಾತ್ರವಿತ್ತು” ಎಂದರು.
ಸರಿಯಾದ ಮಾಹಿತಿ ನೀಡುತ್ತಿಲ್ಲ ಎನ್ನುವ ವಿರೋಧ ಪಕ್ಷಗಳ ನಾಯಕರ ಆರೋಪದ ಬಗ್ಗೆ ಕೇಳಿದಾಗ “ನನ್ನನ್ನು, ಮುಖ್ಯಮಂತ್ರಿಗಳನ್ನು ಹಾಗೂ ಅಧಿಕಾರಿಗಳನ್ನು ಎಲ್ಲರನ್ನು ವಿರೋಧ ಪಕ್ಷದವರು ಬೈದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಮಗೆ ಮೊದಲು ಅಣೆಕಟ್ಟು ಹಾಗೂ ರೈತರನ್ನು ಉಳಿಸುವುದು ಮುಖ್ಯ. ಅವರು ರಾಜಕಾರಣ ಮಾಡಲಿ” ಎಂದರು.
“ನೀರು ಕಡಿಮೆಯಾಗುವ ತನಕ ದುರಸ್ತಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ ಎನ್ನುವ ಪ್ರಶ್ನೆಗೆ “ನೀರಿನ ಹೊರಹರಿವು ಹೆಚ್ಚು ರಭಸದಿಂದ ಕೂಡಿದೆ. ಕೇವಲ 19 ನೇ ಗೇಟ್ ಒಂದರಲ್ಲೇ 9 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚಿನ ನೀರು ಹೋಗುತ್ತಿದೆ. ನೀರಿನ ರಭಸ ಎಷ್ಟಿದೆ ಎಂದು ತಿಳಿಯಲು ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗುತ್ತಿದೆ. ಕೂಡಲೇ ಆ ವಿಡಿಯೋ ಬಿಡುಗಡೆ ಮಾಡಲಾಗುವುದು. ಬೇರೆ ಗೇಟ್ ಗಳಿಗೆ ತೊಂದರೆ ಆಗದಂತೆ ಕೆಲಸ ಮಾಡಲಾಗುವುದು. ಮತ್ತೊಬ್ಬರು, ವಿರೋಧ ಪಕ್ಷದವರು ಹೇಳಿದಂತೆ ಕೆಲಸ ಮಾಡಲು ಆಗುವುದಿಲ್ಲ. ತಂತ್ರಜ್ಞರ ತಂಡದ ಸಲಹೆಯಂತೆ ಕೆಲಸ ಮಾಡಲಾಗುವುದು” ಎಂದು ತಿಳಿಸಿದರು.
ರಾಜ್ಯಪಾಲರು ಸಚಿವ ಸಂಪುಟ ಸಭೆ ತೀರ್ಮಾನ ಗೌರವಿಸುತ್ತಾರೆ
“ರಾಜ್ಯಪಾಲರ ನಡೆ ಮೌನವಾಗಿದೆ ಎಂದು ಕೇಳಿದಾಗ “ರಾಜ್ಯಪಾಲರು ಪ್ರಜ್ಞಾವಂತ, ಬುದ್ದಿವಂತರಿದ್ದಾರೆ. ಅವರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ, ನಮ್ಮ ಮಾತಿಗೆ ಗೌರವ ಕೊಡುತ್ತಾರೆ ಎಂದು ನಂಬಿದ್ದೇವೆ. ನಾನು ಅವರ ಮೇಲೆ ಆತ್ಮವಿಶ್ವಾಸವನ್ನಿಟ್ಟಿದ್ದೇನೆ. ಅವರು ಸಹ ಹಿರಿಯ ರಾಜಕಾರಣಿಯಾಗಿದ್ದು ಸಚಿವ ಸಂಪುಟಸಭೆ ತೀರ್ಮಾನ ಗೌರವಿಸುತ್ತಾರೆಂದು ಅಂದುಕೊಂಡಿದ್ದೇನೆ” ಎಂದು ಅಭಿಪ್ರಾಯಪಟ್ಟರು.
ಹೈಕಮಾಂಡ್ ಸಭೆಯಲ್ಲಿ ಭಾಗಿ
“ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಪಿಸಿಸಿ ಅಧ್ಯಕ್ಷರ ಸಭೆ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆಯಲಿದೆ. ನಾನು ಭಾಗವಹಿಸಲು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಮರಳಲಿದ್ದೇನೆ” ಎಂದು ಹೇಳಿದರು.
BREAKING: ‘ಮೈಸೂರು ದಸರಾ ಆನೆ’ಗಳ ಪಟ್ಟಿ ಬಿಡುಗಡೆ: ಅಭಿಮನ್ಯುವಿಗೆ ‘ಚಿನ್ನದ ಅಂಬಾರಿ’ ಹೋರುವ ಹೊಣೆ
ಮಳೆಯಿಂದಾಗಿ ರಾಜ್ಯಾದ್ಯಂತ 80,000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶ: ಸಚಿವ ಕೃಷ್ಣಭೈರೇಗೌಡ
ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಬಿಗ್ ಶಾಕ್: ‘ಸೆಪ್ಟೆಂಬರ್’ನಿಂದ ‘ಲ್ಯಾಂಡ್ ಬೀಟ್ ಆ್ಯಪ್’ ಆಧರಿಸಿ ತೆರವು ಆರಂಭ