ಬೆಂಗಳೂರು : ಸರ್ಕಾರದ ಆದೇಶದನ್ವಯ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ. ಇದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದ್ದು, ನೋಂದಣಿಯಾಗದ ಹೋಂ-ಸ್ಟೇಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಿದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮತ್ತು ಪರವಾನಿಗೆ ಅವಧಿಯು 5 ವರ್ಷಗಳಿಗೆ ಮುಕ್ತಾಯಗೊಳ್ಳುತ್ತಿರುವ ಹೋಂ-ಸ್ಟೇಗಳು ಪರವಾನಿಗೆಯನ್ನು ನವೀಕರಿಸುವಂತೆ ತಿಳಿಸಲಾಗಿದೆ.
ಹೋಂ-ಸ್ಟೇಗಳ ನೋಂದಣಿಗಾಗಿ ಪ್ರವಾಸೋದ್ಯಮ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅಂತರ್ಜಾಲ ತಾಣ https://kttf.karnatakatourism.org/login ಮುಖಾಂತರ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೋಂ-ಸ್ಟೇ ಪರಿವೀಕ್ಷಣೆಗಾಗಿ ಅಧಿಕಾರಿಗಳು ಭೇಟಿ ನೀಡಿದಾಗ ಹೋಂ-ಸ್ಟೇ ಪ್ರಮಾಣಪತ್ರ ಅಥವಾ ಹೋಂ-ಸ್ಟೇ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿಯನ್ನು ಹಾಜರುಪಡಿಸುವುದು. ಇಲ್ಲವಾದಲ್ಲಿ ಹೋಂ-ಸ್ಟೇ ಜಾಗದ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವುದು.
ಇವುಗಳಲ್ಲದೇ ಮಾಹಿತಿ ಇಲ್ಲದೆ ಅನಧೀಕೃತವಾಗಿ ನಡೆಸುತ್ತಿರುವಂತಹ ಹೋಂ-ಸ್ಟೇಗಳ ಬಗ್ಗೆ ಸಾರ್ವಜನಿಕರು ದೂರು/ ಮಾಹಿತಿ ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮುಖೇನ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂರವಾಣಿ ಸಂಖ್ಯೆ:08272-200519 ಅಥವಾ ಈ-ಮೇಲ್ : ddkodagutourism@gmail.com ಗೆ ತಿಳಿಸಬಹುದು.
ಅದರಂತೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಟೂರ್ಸ್ ಅಂಡ್ ಟ್ರಾವೆಲ್ ಏಜೆನ್ಸಿ ಹಾಗೂ ಮನರಂಜನಾ ಪಾರ್ಕ್ಗಳ ಉದ್ದಿಮೆದಾರರುಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್ಸೈಟ್ http://kttf.karnatakatourism.org/ ನಲ್ಲಿ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.