ಬೆಂಗಳೂರು : ಸಾಂಪ್ರದಾಯಿಕ ನೇಕಾರಿಕೆ ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ನೇಕಾರಿಕೆಗೆ ವೈಜ್ಞಾನಿಕ ಸ್ಪರ್ಶ ಸಿಗದಿದ್ದರೆ ಈ ಉದ್ಯಮ ಉಳಿಯಲು ಸಾಧ್ಯವಿಲ್ಲ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರು ಹೇಳಿದರು.
ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡ್ ಲೂಮ್ಸ್, ನೇಕಾರರ ಸೇವಾ ಕೇಂದ್ರ ಹಾಗೂ ಎಫ್‌ಐಸಿಸಿಐ ಎಫ್ ಎಲ್‌ಒ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 10 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಕೈಮಗ್ಗ ನೇಕಾರರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಅವರು ಮಾತನಾಡಿದರು.
ನೇಕಾರಿಕೆಯಿಂದ ಇಂದು ಹಲವು ಕುಟುಂಬಗಳು ವಿಮುಖವಾಗುತ್ತಿವೆ. ಈ ಕೆಲಸ ಬಿಟ್ಟು ವಲಸೆ ಹೋಗುತ್ತಿದ್ದಾರೆ. ನೇಕಾರಿಕೆಗೆ ಇಂದು ಸವಾಲುಗಳು ಹೆಚ್ಚಿವೆ. ಆದ್ದರಿಂದ ಪಾರಂಪರಿಕ ನೇಕಾರಿಕೆ ಲಾಭವಲ್ಲ ಎಂಬ ಅಭಿಪ್ರಾಯ ಮೂಡಿದೆ. ಪಾರಂಪರಿಕ ನೇಕಾರಿಕೆಯಿಂದ ಜೀವನೋಪಾಯ ಸಾಧ್ಯವಿಲ್ಲ ಎಂಬ ಸಂದಿಗ್ದ ಪರಿಸ್ಥಿತಿ ಉದ್ಭವಿಸಿದೆ ಎಂದು ಅವರು ವಿವರಿಸಿದರು.
ನೇಕಾರಿಕೆಗೆ ಸಾಕಷ್ಟು ಪ್ರೋತ್ಸಾಹವನ್ನು ನಮ್ಮ ಸರ್ಕಾರವು ಇಲಾಖೆಯ ಮೂಲಕ ಮಾಡುತ್ತಿದೆ. ಕೃಷಿ ನಂತರ ಹೆಚ್ಚು ಉದ್ಯೋಗ ನೀಡುತ್ತಾ ಇರುವುದು ನೇಕಾರಿಕೆ. ನೇಕಾರರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ, ವಿದ್ಯುತ್ ಸಬ್ಸಿಡಿ, ಪರಿಶಿಷ್ಟರಿಗೆ ಜವಳಿ ಘಟಕ ಸ್ಥಾಪಿಸಲು ಹಣ ಹೀಗೆ ಹಲವು ಸೌಲಭ್ಯ ನೀಡಲಾಗಿದೆ ಎಂದರು.
ನೇಕಾರಿಕೆ ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಪಿಎಂ ಮಿತ್ರ ಪಾರ್ಕ್ ಜಮೀನು ಗುರುತಿಸಲಾಗಿದೆ. ಈ ಪಾರ್ಕ್ ಸ್ಥಾಪನೆಯಾದರೆ ಸಾಕಷ್ಟು ಉದ್ಯೋಗ ಸಿಗಲಿದೆ. ರಾಜ್ಯದ ಬಜೆಟ್‌ನಲ್ಲಿ ಜವಳಿ ಪಾರ್ಕ್ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದರು.
ಸರ್ಕಾರದ ಎಲ್ಲಾ ಇಲಾಖೆಗಳು ಜವಳಿ ನಿಗಮದ ಮೂಲಕ ಬಟ್ಟೆಗಳನ್ನು ಖರೀದಿಸಿದರೆ ನಿಗಮಗಳಿ ಅನುಕೂಲವಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಇದೇ ಸಮಾರಂಭದಲ್ಲಿ ಕೈ ಮಗ್ಗ ನೇಕಾರರಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕರಾದ ರಿಜ್ವಾನ್ ಅರ್ಷದ್, ಜವಳಿ ಅಭಿವೃದ್ಧಿ ಆಯುಕ್ತರಾದ ಕೆ ಜ್ಯೋತಿ, ಕರ್ನಾಟಕ ರಾಜ್ಯ ಸಹಕಾರ ಕೈ ಮಗ್ಗ ನೇಕಾರರ ಮಹಾಮಂಡಳ ಮತ್ತು ಕಾವೇರಿ ಹ್ಯಾಂಡ್ ಲೂಮ್ಸ್ ಅಧ್ಯಕ್ಷರಾದ ಬಿ ಜೆ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
BREAKING: ನನ್ನ ವಿರುದ್ಧದ ಆರೋಪ ಸಾಬೀತು ಪಡಿಸಿದ್ರೇ ‘ರಾಜಕೀಯ ನಿವೃತ್ತಿ’: ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲ್