ಬೆಂಗಳೂರು : ಮೈಸೂರಿನಲ್ಲಿ 600 ಕೋಟಿ ರೂ. ಹೂಡಿಕೆಯೊಂದಿಗೆ ಹೊಸ ಕಂಪನಿಗಳ ಸ್ಥಾಪನೆ ಮಾಡಲಾಗುವುದು, ಇದರಿಂದ 5,000 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ,
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಡಿಸೈನ್ ಮತ್ತು ತಯಾರಿಕೆ (ಇಎಸ್ಡಿಎಂ) ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನಾಗಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ವಿಶ್ವ ಮಟ್ಟದಲ್ಲಿ ಹೂಡಿಕೆಗಳ ಹರಿವು ಹೆಚ್ಚಿಸುವುದು, ಹೊಸ ಉದ್ಯಮಗಳನ್ನು ಆರಂಭಿಸಲು ಉತ್ತೇಜನ ನೀಡುವುದು ಮತ್ತು ರಾಜ್ಯದಲ್ಲಿ ಪ್ರಾರಂಭಿಸಿರುವ ಉದ್ಯಮಗಳನ್ನು ಉಳಿಸಿಕೊಳ್ಳುವ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸೆಮಿಕಂಡಕ್ಟರ್, ಎಲಿಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮತ್ತು ಘಟಕ ಗೋದಾಮುಗಳು ಸೇರಿದಂತೆ 20ಕ್ಕೂ ಹೆಚ್ಚು ಇಎಸ್ಡಿಎಂ ಕಂಪನಿಗಳು ಕ್ಲಸ್ಟರ್ಗೆ ಸೇರ್ಪಡೆಗೊಳ್ಳುತ್ತಿದ್ದು ಸುಮಾರು 600 ಕೋಟಿ ರೂ.ಗಳ ಹೊಸ ಹೂಡಿಕೆ ಹರಿದು ಬಂದಿದೆ. ಹೆಚ್ಚುವರಿಯಾಗಿ 150 ಎಕರೆಗಳಷ್ಟು ಪಿಸಿಬಿ ಕ್ಲಸ್ಟರ್ ಸ್ಥಾಪಿಸುವ ಉದ್ದೇಶದಿಂದ ಪ್ರಸ್ತುತ ಪರೀಕ್ಷಾ ಸೌಲಭ್ಯವನ್ನು ವಿಸ್ತರಿಸಲು, ಮಲ್ಟಿಟೆನೆನ್ಸಿ ಕ್ಲೀನ್ ರೂಮ್ ಅನ್ನು ಸೇರಿಸಲು ಉದ್ದೇಶಿಸಿದ್ದೇವೆ. ಇದು 5000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ಅಷ್ಟೇ ಅಲ್ಲದೆ, ಮಹಿಳಾ ಉದ್ಯೋಗಿಗಳನ್ನು ಸಬಲೀಕರಣಗೊಳಿಸಲು ಸಹಕಾರಿಯಾಗಲಿದೆ. ಈ ಎಲ್ಲಾ ಬೆಳವಣಿಗೆಯಿಂದ ಜಾಗತಿಕ ಕಂಪನಿಗಳು ಮೈಸೂರಿನಲ್ಲಿ ಬೆಳೆಯಲು ಇದು ಉತ್ತಮ ಸಮಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.