ಬಿಡದಿ: ವಿಜಯೇಂದ್ರ ನನ್ನ ಮೇಲೆ ಆರೋಪ ಮಾಡುತ್ತಾ, ಈ ಪಾದಯಾತ್ರೆ ಹಿಂದೆ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದು ಹೇಳಿದ್ದಾನೆ. ಹೇ.. ವಿಜಯೇಂದ್ರ ನಿನಗೆ ತಾಕತ್ತಿದ್ದರೆ, ಧೈರ್ಯವಿದ್ದರೆ ನೀವು ಹೇಳಿದಂತೆ ಕಾಂಗ್ರೆಸ್ ಪಕ್ಷದ ಯಾವನು ಪಾದಯಾತ್ರೆಗೆ ಕುಮ್ಮಕ್ಕು ನೀಡಿದ್ದಾನೆ ಅವನ ಹೆಸರು ಹೇಳು” ಎಂದು ಡಿಸಿಎಂ ಡಿ.ಕೆ ಶಿವುಕುಮಾರ್ ಅಬ್ಬರಿಸಿದರು.
ಬಿಜೆಪಿ, ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಹಿನ್ನೆಲೆಯಲ್ಲಿ ಬಿಡದಿಯಲ್ಲಿ ಶುಕ್ರವಾರ ಆರಂಭವಾದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
“ಈ ಪಾದಯಾತ್ರೆ ಮೂಲಕ ನಮಗೆ ಈ ಪವಿತ್ರವಾದ ಜನಾಂದೋಲನವನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಈ ಪಾದಯಾತ್ರೆ ಹಮ್ಮಿಕೊಳ್ಳದಿದ್ದರೆ, ಜನತಾ ದಳವನ್ನು ಬಿಜೆಪಿ ಜತೆ ವಿಲೀನ ಮಾಡದಿದ್ದರೆ, ನಾವು ಈ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದು ಲೇವಡಿ ಮಾಡಿದರು.
“ಬಿಜೆಪಿ ಹಾಗೂ ಜೆಡಿಎಸ್ ನವರು ಪಾದಯಾತ್ರೆ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿಗೆ ಬಂದಾಗ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಬಿಜೆಪಿ ಅವಧಿಯಲ್ಲಿ ಬೋವಿ ನಿಗಮದಲ್ಲಿ 87 ಕೋಟಿ, ಕೃಷಿ ಮಾರುಕಟ್ಟೆಗಳಲ್ಲಿ 47 ಕೋಟಿ ಅಕ್ರಮ ನಡೆದಿದೆ. ಈ ಹಗರಣ ನಡೆದಾಗ ಯಾರು ಮುಖ್ಯಮಂತ್ರಿ, ಯಾರು ಮಂತ್ರಿ, ಯಾರು ನಿಗಮದ ಅಧ್ಯಕ್ಷರಾಗಿದ್ದರು? ಈ ಬಗ್ಗೆ ನೀವು ಉತ್ತರ ನೀಡಬೇಕು. ನೀವು ಹೇಳದಿದ್ದರೆ ನಾವು ಹೇಳುತ್ತೇವೆ. ನಾವು ಹೇಳಲು ಇನ್ನು ಒಂದು ವಾರಗಳ ಕಾಲಾವಕಾಶವಿದೆ” ಎಂದು ಹೇಳಿದರು.
“ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಬಿಜೆಪಿಯ ವೀರಯ್ಯ ಅವರು 47 ಕೋಟಿ ರೂ. ನುಂಗಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಆತ ಜೈಲು ಸೇರಿದ್ದಾನೆ. ಬಿಜೆಪಿ ಹಾಗೂ ಜೆಡಿಎಸ್ ನವರು ಈ ಅಕ್ರಮದ ಬಗ್ಗೆ ಯಾಕೆ ಹೋರಾಟ ಮಾಡುತ್ತಿಲ್ಲ? ಈ ಅಕ್ರಮದ ತನಿಖೆಯನ್ನು ಅವರೇ ಯಾಕೆ ತನಿಖೆ ಮಾಡಿಸಲಿಲ್ಲ? ಹೀಗೆ ಅವರ ಕಾಲದಲ್ಲಿ ಆಗಿರುವ ಅಕ್ರಮಗಳ ದೊಡ್ಡ ಪಟ್ಟಿಯೇ ನಮ್ಮ ಬಳಿ ಇವೆ” ಎಂದು ತಿಳಿಸಿದರು.
BREAKING: ಮಂಗಳೂರಲ್ಲಿ ನಡು ರಸ್ತೆಯಲ್ಲೇ ‘ಕಾಲೇಜು ವಿದ್ಯಾರ್ಥಿ’ಗಳ ನಡುವೆ ಹೊಡೆದಾಟ