ಬೆಂಗಳೂರು: ಬೆಂಗಳೂರು ಇಂಡಿಯಾ ನ್ಯಾನೋ ತಂತ್ರಜ್ಞಾನ ಸಮ್ಮೇಳನ ಮಾದರಿಯಲ್ಲಿ ‘ ಕ್ವಾಂಟಮ್ ತಂತ್ರಜ್ಞಾನ ಸಮ್ಮೇಳನ’ವನ್ನು ಸರ್ಕಾರ ಶೀಘ್ರದಲ್ಲೇ ಆಯೋಜಿಸುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
13ನೇ ಬೆಂಗಳೂರು ನ್ಯಾನೋ ತಂತ್ರಜ್ಞಾನ ಸಮ್ಮೇಳನದ ಉದ್ಘಾಟರ ಸಮಾರಂಭದಲ್ಲಿ ಮಾತನಾಡಿದ ಅವರು ” ತಂತ್ರಜ್ಞಾನ ಮನುಷ್ಯನ ಭವಿಷ್ಯದ ಬದುಕಿಗೆ ಪೂರಕವಾಗಿ ಇರಬೇಕು. ನ್ಯಾನೋ ಮತ್ತು ಕ್ವಾಂಟಮ್ ತಂತ್ರಜ್ಞಾನದ ಬೆಳವಣಿಗೆಗೆ ಸರ್ಕಾರದ ಜೊತೆ ಎಲ್ಲರು ಕೈ ಜೋಡಿಸಬೇಕು. ಬೆಂಗಳೂರನ್ನು ಅಗ್ರಗಣ್ಯ ನಗರವನ್ನಾಗಿ ಮಾಡಲು ಸಹಕರಿಸಬೇಕು” ಎಂದು ಹೇಳಿದರು.
“ನ್ಯಾನೋ ತಂತ್ರಜ್ಞಾನದಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅತ್ಯಂತ ಸಮರ್ಥವಾಗಿ ಉತ್ಪಾದನೆಯನ್ನು ಮಾಡಬಹುದು. ಈ ತಂತ್ರಜ್ಞಾನದಿಂದ ಕೃಷಿ, ವಿದ್ಯುತ್, ಆಹಾರ ಸಂಸ್ಕರಣೆ, ಕೈಗಾರಿಕಾ ಕ್ಷೇತ್ರಗಳಲ್ಲಿ ಕಡಿಮೆ ದರದಲ್ಲಿ ಹೆಚ್ಚು ಉತ್ಪಾದನೆ ಮಾಡಿ ಜನಸ್ನೇಹಿಯಾಗಿಸಬೇಕಿದೆ” ಎಂದರು.
“ರಾಜ್ಯದಲ್ಲಿ ಕೈಗಾರಿಕೆ, ಶೈಕ್ಷಣಿಕ ಮತ್ತು ಸಂಶೋಧಕರಿಗೆ ಜ್ಞಾನ ವಿನಿಮಯಕ್ಕೆ ಈ ಕಾರ್ಯಕ್ರಮವು ಜಾಗತಿಕ ವೇದಿಕೆಯಾಗಿದೆ. ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ನೆರವಾಗಲಿದೆ. ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನವು ಭವಿಷ್ಯದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ. ರಾಜ್ಯ ಸರಕಾರವು ಇದರ ಬೆಳವಣಿಗೆಗೆ ಸಾಕಷ್ಟು ಆದ್ಯತೆ ಕೊಟ್ಟಿದೆ” ಎಂದು ಹೇಳಿದರು.
“ನ್ಯಾನೋ ತಂತ್ರಜ್ಞಾನ ಇಂದು ಹೆಚ್ಚು ಪ್ರಚಲಿತದಲ್ಲಿದ್ದು, ಕೃಷಿಯಲ್ಲೂ ಬಳಸಲಾಗುತ್ತಿದೆ. ಈ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿದ್ದು, ಇದರಿಂದ ರಾಜ್ಯದ ಆರ್ಥಿಕತೆಯು ಹೆಚ್ಚಾಗುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರವು ನ್ಯಾನೋ ತಂತ್ರಜ್ಞಾನದಲ್ಲಿ ಹೆಚ್ಚು ಮುಂದುವರೆಯಬೇಕು. ಇದಕ್ಕೆ ನಮ್ಮ ಸರಕಾರವು ಸಂಪೂರ್ಣ ಸಹಕಾರ ನೀಡಲಿದ್ದು, ಅಗತ್ಯ ನೀತಿಗಳನ್ನು ರೂಪಿಸಲು ಬದ್ಧವಾಗಿದೆ” ಎಂದರು.
“ನ್ಯಾನೋ ತಂತ್ರಜ್ಞಾನವನ್ನು ಔಷಧಿ, ಮೆಟಿರಿಯಲ್ ವಿಜ್ಞಾನ, ಆಹಾರ ಸಂಸ್ಕರಣೆ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಅನ್ವಯಿಸಬೇಕಿದೆ. ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಹೆಜ್ಜೆ ಗುರುತು ಮೂಡಿಸುವ ಸಲುವಾಗಿ ಹಾಗೂ ಬೆಂಗಳೂರಿನ ಹೆಸರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಕಳೆದ ವರ್ಷ ಹೊಸ ಕಾನೂನು ತರಲಾಗಿದೆ” ಎಂದು ಹೇಳಿದರು.
“ನಾನು ಈ ಹಿಂದೆ ಇಂಧನ ಸಚಿವರಾಗಿದ್ದಾಗ ಪಾವಗಡದ ಬಳಿ ಸೋಲಾರ್ ಪಾರ್ಕನ್ನು ನಿರ್ಮಾಣ ಮಾಡಿಸಿದೆ. ಪ್ರಸ್ತುತ ಮೂರು- ನಾಲ್ಕು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ನ್ಯಾನೋ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಅತ್ಯಂತ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು” ಎಂದು ತಿಳಿಸಿದರು.
“ಕಸ ಸಂಸ್ಕರಣೆಗೆ ನ್ಯಾನೋ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಅಷ್ಟೊಂದು ಯಶಸ್ವಿ ಕಂಡಿಲ್ಲ. ಗ್ಯಾಸ್ಉತ್ಪಾದನೆ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದೆ. ನ್ಯಾನೋ ತಂತ್ರಜ್ಞಾನ ಬಳಸಿಕೊಂಡು ಕಸದ ಸಮಸ್ಯೆ ಬಗೆಹರಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಮ್ಮ ಸರ್ಕಾರ ತಂತ್ರಜ್ಞಾನದ ಬೆಳವಣಿಗೆಗೆ ಹೆಚ್ಚು ಮಹತ್ವ ನೀಡುತ್ತದೆ” ಎಂದು ಭರವಸೆ ನೀಡಿದರು.
“ಬೆಂಗಳೂರು ತನ್ನ ಹೊಸ ಆವಿಷ್ಕಾರಗಳಿಗೆ ಹೆಸರು ಮಾಡಿದೆ. ನ್ಯಾನೋ ಟೆಕ್ನಾಲಜಿ, ಐಟಿ, ಬಯೋ ಟೆಕ್ನಾಲಜಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೆಂಗಳೂರು ಹೊಸ, ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಭಾರತೀಯ ವಿಜ್ಞಾನ ಸಂಸ್ಥೆಗೆ ಭೂಮಿಯನ್ನು ನೀಡಿ ವಿಜ್ಞಾನ ಮತ್ತು ಸಂಶೋಧನೆ ಹೆಚ್ಚಿನ ಒತ್ತು ನೀಡಿದರು. ಇದು ಬೆಂಗಳೂರಿನ ಬಲವರ್ಧನೆಗೆ ಕಾರಣವಾಯಿತು” ಎಂದರು.
“ಬಯೋಟೆಕ್ನಾಲಜಿ, ಐಟಿ ಕ್ಷೇತ್ರದಲ್ಲಿ ಅನೇಕ ಸಂಶೋಧನಾ ಸಂಸ್ಥೆಗಳು ಬೆಂಗಳೂರಿನ ಹೆಸರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿವೆ. ನೂರಾರು ಪ್ರಸಿದ್ಧ ಚಿಂತಕರು, ವಿಜ್ಞಾನಿಗಳು ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯ ಅವರು ನಮಗೆಲ್ಲ ಮಾದರಿಯಾಗಿದ್ದಾರೆ. ಕರ್ನಾಟಕದಲ್ಲಿ ಸುಮಾರು 300ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿವೆ. ನಾವು ವರ್ಷಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಯಾರು ಮಾಡುತ್ತಿದ್ದೇವೆ” ಎಂದು ಹೇಳಿದರು.
“ಕರ್ನಾಟಕದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಪ್ರಪಂಚದಲ್ಲಿ ನಾನಾ ಭಾಗಗಳಲ್ಲಿ ಇಂಜಿನಿಯರ್ ಗಳಾಗಿದ್ದಾರೆ. ಆ ದೇಶಗಳ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಶಾಸಕ ಮಿತ್ರ ರಿಜ್ವಾನ್ ಹರ್ಷದ್ ಹೇಳಿದಂತೆ ಬೆಂಗಳೂರು ಅತ್ಯಂತ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿರುವ ನಗರ. ಬೆಂಗಳೂರು ಮಾತ್ರ ಬೆಳೆಯುತ್ತಿಲ್ಲ. ಈ ದೇಶದ ಆರ್ಥಿಕತೆ, ಬೌದ್ಧಿಕತೆ ಸೇರಿದಂತೆ ನೂರಾರು ಜನರ ಬದುಕನ್ನು ಬೆಳೆಸುತ್ತಿದೆ” ಎಂದರು.
“ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜೊತೆಗೆ ಅತ್ಯಂತ ಹೆಚ್ಚು ವಿದೇಶಿ ಬಂಡವಾಳವನ್ನು ಸೆಳೆಯುತ್ತಿದೆ. ಆಟೋಮೊಬೈಲ್, ಟೆಕ್ಸ್ಟೈಲ್, ಎಲೆಕ್ಟ್ರಾನಿಕ್ಸ್, ಸೇರಿದಂತೆ ಅನೇಕ ರೀತಿಯ ಉದ್ದಿಮೆಗಳು ರಾಜ್ಯ ರಾಜಧಾನಿಯಲ್ಲಿವೆ. ಬೆಂಗಳೂರಿನ ಸಂಸ್ಕೃತಿ ಮತ್ತು ವಾತಾವರಣ ಎರಡೂ ಅನುಕೂಲಕರವಾಗಿದೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಇದ್ದೇ ಅಲ್ಲಿ ಹೆಚ್ಚು ಬಿಸಿ ಹವಾಮಾನವಿದೆ. ಆದರೆ ಬೆಂಗಳೂರು ವರ್ಷದ ಹತ್ತು ತಿಂಗಳೂ ತಣ್ಣಗಿನ ಹವಾಮಾನ ಹೊಂದಿರುತ್ತದೆ . ಇದು ಅನೇಕ ಉದ್ದಿಮೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ” ಎಂದರು.
“ಇದೇ ವೇಳೆ ವೇದಿಕೆಯಲ್ಲಿದ್ದ ಭಾರತ ರತ್ನ ವಿಜ್ಞಾನಿ ಸಿ ಎನ್ ಆರ್ ರಾವ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ದೇಶದ ಆಸ್ತಿಯಾದ ಅವರಿಗೆ ಆಯಸ್ಸು, ಆರೋಗ್ಯ ಭಗವಂತ ನೀಡಲಿ” ಎಂದು ತಿಳಿಸಿದರು.
‘ಅಂತರ್ಜಾತಿ ವಿವಾಹ’ಕ್ಕೆ ಪೋಷಕರ ವಿರೋಧ: ಪ್ರೇಮಿಗಳಿಬ್ಬರು ‘ಆತ್ಮಹತ್ಯೆ’ಗೆ ಶರಣು
Good News: ಬೆಂಗಳೂರಲ್ಲಿ ಆಸ್ತಿ ತೆರಿಗೆ ‘OTS’ ಕಾಲಾವಕಾಶ 1 ತಿಂಗಳು ವಿಸ್ತರಣೆ: ಡಿಸಿಎಂ ಡಿ.ಕೆ. ಶಿವಕುಮಾರ್