ಬೆಂಗಳೂರು :ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ವಿಡಿಯೊಗಳು ಅಸಲಿ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್ಎಸ್ಎಲ್) ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಎಫ್ಎಸ್ಎಲ್ ವರದಿ ಬಂದಿದ್ದು, ಆ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ವರದಿಯಲ್ಲಿ ಬಹಿರಂಗವಾಗಿದೆ. ವಿಡಿಯೋಗಳು ಯಾವುದೇ ಅನಿಮೇಷನ್, ಗ್ರಾಫಿಕ್ಸ್, ಎಡಿಟ್, ಮಾರ್ಫ್ ಮಾಡಿದ್ದಲ್ಲ. ಅವು ಅಸಲಿ ವಿಡಿಯೋಗಳು ಎಂದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ. ಈ ಮೂಲಕ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ಆ ವಿಡಿಯೋ ನಕಲಿ, ವಿರೋಧಿಗಳು ಎಡಿಟ್, ಮಾರ್ಫಿಂಗ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಎಸ್ಐಟಿ ವಿಡಿಯೋಗಳ ಅಸಲಿಯತ್ತು ತಿಳಿಯಲು ಎಫ್ಎಸ್ಎಲ್ಗೆ ಕಳುಹಿಸಿತ್ತು. ಇದೀಗ ವಿಡಿಯೋಗಳ ಎಫ್ಎಸ್ಎಲ್ ವರದಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಅಶ್ಲೀಲ ವಿಡಿಯೋ ಅಸಲಿ ಎಂಬುದು ಸಾಬೀತಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ದಾಖಲಾದ ಸಂದರ್ಭದಲ್ಲಿ ತನಿಖಾಧಿಕಾರಿಗಳು ಅಶ್ಲೀಲ ವಿಡಿಯೋಗಳನ್ನು ಜಪ್ತಿ ಮಾಡಿ ಎಫ್ಎಸ್ಎಲ್ಗೆ ಕಳುಹಿಸಿದ್ದು, ವಿಡಿಯೋಗಳು ನೈಜವಾಗಿವೆ. ಯಾವುದೇ ರೀತಿಯ ತಿರುಚುವಿಕೆ ನಡೆದಿಲ್ಲ ಎಂದು ವರದಿ ನೀಡಲಾಗಿದೆ.