ಬೆಂಗಳೂರು: ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿ, 30 ವರ್ಷಗಳಿಂದಲೂ ಇಲ್ಲಿ ನೆಲೆಯೂರಿರುವ ಟೊಯೋಟಾ ಕಂಪನಿಯ ಹೂಡಿಕೆ ಎಂದಿನಂತೆ ಮುಂದುವರಿಯಲಿದೆ. ಅದು ಮಹಾರಾಷ್ಟ್ರದಲ್ಲೂ ಹೂಡಿಕೆ ಮಾಡುತ್ತಿರುವುದನ್ನು ಬೇರೆ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಟೊಯೋಟಾ ಕಂಪನಿಯು ಮಹಾರಾಷ್ಟ್ರದಲ್ಲಿ ಹೆಚ್ಚುವರಿ ಹೂಡಿಕೆ ಮಾಡಬಹುದು. ನಮ್ಮಲ್ಲಿ ಹೂಡಿಕೆ ಮಾಡಿದ ಮಾತ್ರಕ್ಕೆ ಅವರು ಇನ್ನೊಂದು ಕಡೆ ಬಂಡವಾಳ ಹೂಡಬಾರದು ಎಂದೇನಿಲ್ಲ. ಆದರೆ ರಾಜ್ಯದಲ್ಲಿ ಆ ಕಂಪನಿಯ ಹೂಡಿಕೆ ಎಂದಿನಂತೆಯೇ ಮುಂದುವರಿದುಕೊಂಡು ಹೋಗಲಿದೆ’ ಎಂದಿದ್ದಾರೆ.
ಟೊಯೋಟಾ ಕಂಪನಿಯು 2023ರಲ್ಲಿ 3,300 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬಿಡದಿಯಲ್ಲಿ ತನ್ನ ಮೂರನೇ ಕಾರು ತಯಾರಿಕೆ ಘಟಕ ತೆರೆಯಲು ರಾಜ್ಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2022ರಲ್ಲಿ ಅದು ನಮ್ಮಲ್ಲಿ 4,100 ಕೋಟಿ ರೂಪಾಯಿ ಹೂಡಿದೆ. ಅದರ ಕೇಂದ್ರ ಕಚೇರಿ ಮತ್ತು ಸಂಶೋಧನಾ ಕೇಂದ್ರಗಳು ನಮ್ಮಲ್ಲೇ ಇವೆ ಎಂದು ಅವರು ಹೇಳಿದ್ದಾರೆ.
ಉದ್ಯಮಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವುದು ಒಂದು ಸಹಜ ವಿದ್ಯಮಾನ. ಟೊಯೋಟಾ ಕೂಡ ಅದೇ ರೀತಿಯಲ್ಲಿ ನೆರೆ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದೆ. ಇದನ್ನು ಕರ್ನಾಟಕಕ್ಕೆ ಆಗುತ್ತಿರುವ ನಷ್ಟವೆಂದು ಭಾವಿಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
BREAKING: ವಯನಾಡ್ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 200ಕ್ಕೆ ಏರಿಕೆ | Wayanad landslide