ಬೆಂಗಳೂರು: ನೆರೆಯ ಕೇರಳದಲ್ಲಿ ಸಂಭವಿಸಿರುವ ಭಾರೀ ಭೂ ಕುಸಿತದಿಂದ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸುವ ತುರ್ತು ಅಗತ್ಯವಿದೆ. ಅಪಾಯದ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಎಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲಾ ಕೇಂದ್ರಗಳಲ್ಲಿ ಮೊಕ್ಕಂ ಹೂಡಲು ನಿರ್ದೇಶಿಸಬೇಕು. ಜಿಲ್ಲಾಧಿಕಾರಿಗಳು ಸೇರಿ ಎಲ್ಲಾ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ 24/7 ಸನ್ನದ್ಧವಾಗಿರಬೇಕು. ಅಪಾಯದ ಸ್ಥಳಗಳಿಂದ ಜನರನ್ನು ತಕ್ಷಣವೇ ಸುರಕ್ಷತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯು ದುರಂತ ಸ್ಥಳ ವಯನಾಡಿನ ಪಕ್ಕದಲ್ಲೇ ಇದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅತಿ ಅಪಾಯದ ಸ್ಥಿತಿ ಇದೆ. ಅನೇಕ ಕಡೆ ರೆಟ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆಯ ಮುನ್ಸೂಚನೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಕೆಲ ಜಿಲ್ಲೆಗಳಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿದೆ. ನೆರೆ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಅಲ್ಲಿನ ಅಣೆಕಟ್ಟೆಗಳಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ರಾಜ್ಯಕ್ಕೆ ಅಪಾರ ನೆರೆ ನೀರು ಹರಿದು ಬರುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಅಪಾಯದ ಮಟ್ಟ ಮೀರಿ ನೂರಾರು ಗ್ರಾಮಗಳಿಗೆ ನುಗ್ಗಿದೆ, ಅಪಾರ ಬೆಳೆ ನಾಶವಾಗಿದೆ. ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಜನರ ಜತೆಯಲ್ಲಿರಬೇಕು ಎಂದು ಸಚಿವರು ಹೇಳಿದ್ದಾರೆ.
ಸರಕಾರ, ಸಚಿವರು, ಶಾಸಕರು, ಅಧಿಕಾರಿಗಳಿಗೆ ನನ್ನ ಕಳಕಳಿಯ ಸಲಹೆ ಇಷ್ಟೇ. ಇಂಥ ದುರಿತ ಪರಿಸ್ಥಿತಿಯಲ್ಲಿ ಇಡೀ ಆಡಳಿತ ವ್ಯವಸ್ಥೆ ಜನರ ಹತ್ತಿರದಲ್ಲಿರಬೇಕು. ರೈತರೊಂದಿಗೆ ನೇರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿರಬೇಕು. ಪ್ರಕೃತಿ ವಿಕೋಪ ಯಾವುದೇ ಕ್ಷಣದಲ್ಲಿ ಬಂದೆರಗುವ ಅಪಾಯವನ್ನು ನಿರ್ಲಕ್ಷಿಸಬಾರದು ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೂಡಲೇ ಎಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲಾ ಕೇಂದ್ರಗಳಲ್ಲಿ ಮೊಕ್ಕಂ ಹೂಡಲು ನಿರ್ದೇಶಿಸಬೇಕು. ಜಿಲ್ಲಾಧಿಕಾರಿಗಳು ಸೇರಿ ಎಲ್ಲಾ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ 24/7 ಸನ್ನದ್ಧವಾಗಿರಬೇಕು. ಅಪಾಯದ ಸ್ಥಳಗಳಿಂದ ಜನರನ್ನು ತಕ್ಷಣವೇ ಸುರಕ್ಷತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಸಚಿವರು ಕೋರಿದ್ದಾರೆ.
ಶಿವಮೊಗ್ಗ: ನಾಳೆ ‘ಮಳೆಹಾನಿ ಪ್ರದೇಶ’ಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ಭೇಟಿ, ವೀಕ್ಷಣೆ
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಹೆಚ್ಚುವರಿ ನಿಲುಗಡೆಗೆ ಅವಕಾಶ
ಶಿವಮೊಗ್ಗ: ನಾಳೆ ಸಾಗರದ ‘ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ‘ಪತ್ರಿಕಾ ದಿನಾಚರಣೆ’