ಬೆಳಗಾವಿ : ಡಿಸಿಎಂ ಡಿ.ಕೆ.ಶಿವಕುಮಾರ್ ಮಹಾನಾಯಕ ಅಲ್ಲ, ಈಗ ಅವರಿಗೆ ಸಿಡಿ ಶಿವು ಅಂತ ಹೊಸದಾಗಿ ನಾಮಕರಣ ಮಾಡಿದ್ದೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ನಾನು ಅವರನ್ನು ಮಹಾನ್ ನಾಯಕ ಎಂದು ಟೀಕಿಸುತಿದ್ದೆ. ಆದರೆ ಈ ಪದ ಅಪಾರ್ಥವಾಗಿ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದಂತಾಗುತ್ತಿತ್ತು. ಹೀಗಾಗಿ ಅವರಿಗೆ ಈಗ ಸಿಡಿ ಶಿವು ಎಂದು ಹೊಸದಾಗಿ ನಾಮಕರಣ ಮಾಡಿದ್ದೇವೆ. ಇತ್ತೀಚಿಗೆ ನಾನು ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದೆ. ಈ ಸಂದರ್ಭದಲ್ಲಿ ನಾವುಗಳು ಡಿ.ಕೆ. ಶಿವಕುಮಾರ್ ಅವರಿಗೆ ಸಿಡಿ ಶಿವು ಎಂದು ಮರುನಾಮಕರಣ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಮುಡಾ ಹಗರಣಕ್ಕಿಂತ ವಾಲ್ಮೀಕಿ ನಿಗಮದ ಹಗರಣ ದೊಡ್ಡದು. ವಾಲ್ಮೀಕಿ ನಿಗಮದ ಹಗರಣ, ಎಸ್ಸಿಎಸ್ಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿಗೆ ಬಳಸಿದ್ದಾರೆ. ಇದನ್ನು ಖಂಡಿಸಿ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ಸಿದ್ಧರಿದ್ದೇವೆ. ಪಾದಯಾತ್ರೆ ಬಗ್ಗೆ ಹೈಕಮಾಂಡ್ನಿಂದ ಅನುಮತಿ ಕೇಳಿದ್ದೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ವಾಲ್ಮೀಕಿ ಸಮುದಾಯಕ್ಕೆ ರಾಜ್ಯ ಸರ್ಕಾರ ಮೋಸ ಮಾಡಿದೆ. ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದರೇ ನಾನು, ಬಸನಗೌಡ ಪಾಟೀಲ್ ಯತ್ನಾಳ್ ಪಾದಯಾತ್ರೆ ಮಾಡಲು ಸಿದ್ದರಿದ್ದೇವೆ. ಸದನದಲ್ಲಿ ಗಲಾಟೆ ಮಾಡಿದರೆ ಸಾಲಲ್ಲ, ಪಾದಯಾತ್ರೆ ಮಾಡಬೇಕು. ಬಳ್ಳಾರಿ ಪಾದಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಪಾದಯಾತ್ರೆ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಜೊತೆ ಮಾತನಾಡಲ್ಲ. ನಾನೇನಿದ್ದರೂ ಹೈಕಮಾಂಡ್ ಜೊತೆ ಮಾತನಾಡ್ತೇನೆ. ಪಾದಯಾತ್ರೆಗೆ ರಾಜ್ಯ ಬಿಜೆಪಿ ಅಧ್ಯಕ್ಷರು ಒಪ್ಪಿಲ್ಲ, ಒಪ್ಪುವುದೂ ಇಲ್ಲ ಎಂದು ಕಿಡಿ ಕಾರಿದರು.