ಗಾಝಾ: ಗಾಝಾದ ದೇರ್ ಅಲ್-ಬಾಲಾಹ್ನಲ್ಲಿ ಬಾಲಕಿಯರ ಶಾಲೆಯ ಮೇಲೆ ಇಸ್ರೇಲ್ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 30 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಮತ್ತು ದಾಳಿಯಲ್ಲಿ ನೂರಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸ್ಥಳಾಂತರಗೊಂಡ ಫೆಲೆಸ್ತೀನ್ ಕುಟುಂಬಗಳು ಆಶ್ರಯ ಹುಡುಕುತ್ತಿರುವ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ದೇರ್ ಅಲ್-ಬಾಲಾಹ್ ಒಂದಾಗಿದೆ. ಆದಾಗ್ಯೂ, ಇಸ್ರೇಲಿ ಮಿಲಿಟರಿ ನಾಗರಿಕರ ಮೇಲಿನ ದಾಳಿಯನ್ನು ಮತ್ತೆ ಸಮರ್ಥಿಸಿಕೊಂಡಿದ್ದು, ಹಮಾಸ್ ನಿಯಂತ್ರಿತ ಕಮಾಂಡ್ ಸೆಂಟರ್ ಮೇಲೆ ದಾಳಿ ನಡೆಸಿದೆ ಎಂದು ಹೇಳಿದೆ.
ದೇರ್ ಅಲ್-ಬಾಲಾಹ್ನ ಅಲ್-ಅಕ್ಸಾ ಆಸ್ಪತ್ರೆಯಲ್ಲಿ, ಆಂಬ್ಯುಲೆನ್ಸ್ಗಳು ಗಾಯಗೊಂಡ ಫೆಲೆಸ್ತೀನೀಯರನ್ನು ವೈದ್ಯಕೀಯ ಸೌಲಭ್ಯಕ್ಕೆ ಸಾಗಿಸಿದವು. ಗಾಯಗೊಂಡವರಲ್ಲಿ ಕೆಲವರು ಕಾಲ್ನಡಿಗೆಯಲ್ಲಿ ಬಂದರು, ಅವರ ಬಟ್ಟೆಗಳು ರಕ್ತದಿಂದ ಕೂಡಿದ್ದವು. ಶಾಲೆಯ ಒಳಗೆ, ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದವು. ಜನರು ಅವಶೇಷಗಳ ಅಡಿಯಲ್ಲಿ ಸಂತ್ರಸ್ತರನ್ನು ಹುಡುಕುತ್ತಿರುವುದು ಕಂಡುಬಂದಿದೆ ಮತ್ತು ಕೆಲವರು ಕೊಲ್ಲಲ್ಪಟ್ಟವರ ಅವಶೇಷಗಳನ್ನು ಸಂಗ್ರಹಿಸುತ್ತಿದ್ದಾರೆ.
ಕೇಂದ್ರ ಗಾಝಾದ ಖದೀಜಾ ಶಾಲೆಯ ಕಾಂಪೌಂಡ್ ಒಳಗಿನ ಹಮಾಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದ್ದು, ಈ ಶಾಲೆಯನ್ನು “ಸೈನಿಕರ ವಿರುದ್ಧ ದಾಳಿ ನಡೆಸಲು ಮತ್ತು ಶಸ್ತ್ರಾಸ್ತ್ರ ಸಂಗ್ರಹವಾಗಿ ಬಳಸಲಾಗುತ್ತಿದೆ” ಎಂದು ಆರೋಪಿಸಿದೆ. ಶಾಲೆಯ ಮೇಲೆ ದಾಳಿ ಮಾಡುವ ಮೊದಲು ನಾಗರಿಕರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಇಸ್ರೇಲ್ ಹೇಳಿಕೆ ಹೇಳಿದ್ದರೂ, ನಾಗರಿಕರ ಪ್ರಾಣಹಾನಿ ವಿಭಿನ್ನ ಕಥೆಯನ್ನು ಹೇಳುತ್ತದೆ.