ರೈತರೇ ತಮ್ಮ ಜಮೀನುಗಳಲ್ಲಿ ಮೊಬೈಲ್ ಆಪ್ ಮೂಲಕ ರೈತರ ಸರ್ವೇ ನಂಬರ್ ವಾರು, ಹಿಸ್ಸಾವಾರು ಬೆಳೆ ವಿವರ ದಾಖಲಿಸುವ, ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರಸಹಿತ ‘ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ 2024-25’ ರಲ್ಲಿ ಅಪ್ಲೋಡ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಗೂ ಬೃಹತ್ ನೀರಾವರಿ ಇಲಾಖೆಗಳ ಸಿಬ್ಬಂದಿಗಳು ಬೆಳೆ ವಿವರ ದಾಖಲಿಸಲು ರೈತರಿಗೆ ಮಾಹಿತಿ ನೀಡುವರು.
ಬೆಳೆ ವಿವರ ದಾಖಲಿಸದ ರೈತರ ತಾಕುಗಳನ್ನು ನಂತರ ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳಿಂದ ಸಮೀಕ್ಷೆ ಆಗಸ್ಟ್ 15 ರಿಂದ ಸೆಪ್ಟೆಂಬರ್ 31 ರವರೆಗೆ ಮಾಡಿಸಲಾಗುವುದು.ಹೀಗೆ ಸಂಗ್ರಹಿಸಿದ ಬೆಳೆ ವಿವರಗಳು ಪಹಣಿಯಲ್ಲಿ ದಾಖಲಾಗುವುದರ ಜೊತೆಗೆ ಸರ್ಕಾರದ ಪ್ರಮುಖ ಯೋಜನೆಗಳಾದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಪ್ರಕೃತಿ ವಿಕೋಪದಡಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ಪರಿಹಾರ ವಿತರಿಸಲು, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಮತ್ತು ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಬೆಳೆ ಸಮೀಕ್ಷೆಯ ಮೇಲ್ವಿಚಾರಕರಾಗಿ ರೈತರು ಅಥವಾ ಖಾಸಗಿ ನಿವಾಸಿಗಳು ದಾಖಲಿಸಿದ ಬೆಳೆ ವಿವರಗಳನ್ನು ಪರಿಶೀಲಿಸಿ ದೃಢೀಕರಿಸುವರು. ಬೆಳೆ ಸಮೀಕ್ಷೆಯು ಕೃಷಿ ಇಲಾಖೆಯ ಮುಖಾಂತರ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಜರುಗುವುದು.
ಬೆಳೆ ಸಮೀಕ್ಷೆ ವಿವರಗಳ ಕುರಿತು ಆಕ್ಷೇಪಣೆಗಳಿದ್ದರೆ ರೈತರು ‘beledarshak’ ಆ್ಯಪ್ ಮೂಲಕ ಅಥವಾ ಖುದ್ದಾಗಿ ಕೃಷಿ, ತೋಟಗಾರಿಕೆ ಅಥವಾ ತಾಲ್ಲೂಕು ತಹಶೀಲ್ದಾರ್ರವರ ಕಚೇರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದಾಗಿದೆ. ರೈತರು ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ ೧೫ ರವರೆಗೆ ಸಮಯಾವಕಾಶವಿರುತ್ತದೆ.
ಮರುಸಮೀಕ್ಷೆ ಆಪ್ ಕೂಡ ಬಿಡುಗಡೆ ಆಗಲಿದ್ದು ಸೂಪರ್ವೈಸರ್ಗಳು ತಿರಸ್ಕರಿಸಿದ ಬೆಳೆ ವಿವರಗಳನ್ನು PRs ಆ್ಯಪ್ ನಲ್ಲಿ ತ್ವರಿತವಾಗಿ ಮರು ಸಮೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.