ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ( Health Department ) ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಂತ ನೌಕರರನ್ನು ಖಾಯಂಗೊಳಿಸುವುದಾಗಿ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ( Congress Governement ) ಅಧಿಕಾರಕ್ಕೆ ಬಂದು ವರ್ಷವೇ ಕಳೆದರೂ, ಪ್ರಣಾಳಿಕೆಯ ಘೋಷಣೆಯ ಬಗ್ಗೆ ಸಿಎಂ ಸಿದ್ಧರಾಮಯ್ಯ( CM Siddaramaiah), ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗಲೀ ಚಕಾರವೇ ಎತ್ತಿಲ್ಲ. ಹಾಗಾದ್ರೆ ಆರೋಗ್ಯ ಇಲಾಖೆಯ NHM ನೌಕರರನ್ನು ಖಾಯಂ ಯಾವಾಗ ಮಾಡ್ತೀರಿ ಸಾರ್ ಅಂತ ನೌಕರರು ಸಿಎಂ ಸಿದ್ಧರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ.
ರಾಜ್ಯದ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ( National Health Mission- NHM) ಸಾವಿರಾರು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ಟಾಫ್ ನರ್ಸ್ ಸೇರಿದಂತೆ ಸಮುದಾಯ ಆರೋಗ್ಯ ಅಧಿಕಾರಿಗಳು ಒಳಗೊಂಡು ವಿವಿಧ ವರ್ಗದಲ್ಲಿ NHM ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನೌಕರರನ್ನು ಖಾಯಂಗೊಳಿಸುವುದಾಗಿ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲೇ ಘೋಷಣೆ ಮಾಡಿತ್ತು. ಆದ್ರೇ ಈವರೆಗೂ ಆ ಬಗ್ಗೆ ಮಾತೇ ಎತ್ತಿಲ್ಲ. ಖಾಯಂ ಮಾಡೋ ಘೋಷಣೆ ಪ್ರಣಾಳಿಕೆಯಲ್ಲೇ ಉಳಿದಿದೆ ಅಂತ ನೌಕರರು ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿಂಗಳಾನುಗಟ್ಟಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಇಲಾಖೆಯ NHM ಗುತ್ತಿಗೆ, ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಂತ ಅಂದಿನ ಕೆಪಿಸಿಸಿ ಅಧ್ಯಕ್ಷರು, ಇಂದಿನ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದಾಗಿ ಹೇಳಿದ್ದರು.
ಇದಲ್ಲದೇ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲೂ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲಾಗುತ್ತದೆ. ಈ ಸಂಬಂಧ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಖಾಯಂಗೊಳಿಸಲಾಗಿರುವ ಬಗ್ಗೆ ವರದಿಯನ್ನು ಪಡೆದು ಕ್ರಮ ವಹಿಸಲಾಗುವುದು ಅಂತ ಘೋಷಣೆ ಮಾಡಲಾಗಿತ್ತು. ಆದರೇ ಈವರೆಗೂ ಪ್ರಣಾಳಿಕೆಯ ಘೋಷಣೆ, ಘೋಷಣೆಯಾಗೇ ಉಳಿದಿದೆಯೇ ಹೊರತು ಅದರ ಬಗ್ಗೆ ಕ್ರಮವಹಿಸೋ ಕಾರ್ಯವಾಗಿಲ್ಲ ಅಂತ ಆರೋಗ್ಯ ಇಲಾಖೆಯ ನೌಕರರು ಗೋಳು ತೋಡಿಕೊಂಡಿದ್ದಾರೆ.
ಆರೋಗ್ಯ ಇಲಾಖೆಯಲ್ಲಿನ NHM ಗುತ್ತಿಗೆ ನೌಕರರು ಮಾಡೋದು ಒಂದೇ ಕೆಲಸ. ಸರ್ಕಾರಿ ನೌಕರರು ಮಾಡೋದು ಒಂದೇ ಕೆಲಸ. ಕಳೆದ 15-20 ವರ್ಷಗಳಿಂದ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ನಮಗೆ ಸರ್ಕಾರಿ ನೌಕರರ ಅರ್ಧ ದಷ್ಟು ಸಂಬಳವಿಲ್ಲ. ಇದರಿಂದ ಜೀವನ ನಿರ್ವಹಣೆ, ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಕಷ್ಟವಾಗುತ್ತಿದೆ. ವೇತನ ತಾರತಮ್ಯ ನಿವಾರಿಸುವಂತೆಯೂ ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆಗಾಗಿ ಹೆಣಗಾಡುತ್ತಿದೆ ಎನ್ನಲಾಗುತ್ತಿದೆ. ಇದರ ನಡುವೆಯೂ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಂತೆ ವೇತನ ಜಾರಿಗೆ ಆದೇಶಿಸಲಾಗಿದೆ. ಅದೇ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರಿಗೆ ಏಕಿಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಅನ್ನೋದು ಹಲವು ನೌಕರರ ಪ್ರಶ್ನೆಯಾಗಿದೆ.
ಅಂದಹಾಗೇ ಕೋವಿಡ್ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೇ ತಮ್ಮ ಜೀವವನ್ನೇ ಮುಡುಪಾಗಿಟ್ಟು, ಜನತೆಯ ಸೇವೆಯಲ್ಲಿ ತೊಡಗಿದ್ದವರು ಆರೋಗ್ಯ ಇಲಾಖೆ ನೌಕರರು. ಮಕ್ಕಳು, ಪತಿ, ಕುಟುಂಬಸ್ಥರಿಂದ ತಿಂಗಳಾನುಗಟ್ಟಲೇ ದೂರವೇ ಉಳಿದಿದ್ದಂತ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆಯ ನೌಕಕರರು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ, ಗುಣಮುಖರಾಗುವಂತೆ ಮಾಡಿದ್ದಾರೆ. ಇವರ ಕರ್ತವ್ಯವನ್ನು, ಕೆಲಸವನ್ನು ಅನೇಕರು ಹಾಡಿ ಹೊಗಳಿದ್ದೂ ಇದೆ.
ಆದ್ರೇ ಹೀಗೆ ಕರ್ತವ್ಯ ನಿರ್ವಹಿಸಿದ್ದಂತ ಆರೋಗ್ಯ ಇಲಾಖೆಯ NHM ಗುತ್ತಿಗೆ ನೌಕಕರನ್ನು ಮಾತ್ರ, ಖಾಯಂ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಂತ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ಆ ಮಾತನ್ನೇ ಮರತೆದಿದ್ದಾರೆ. ದಯವಿಟ್ಟು ನಮ್ಮನ್ನು ಖಾಯಂಗೊಳಿಸಿ. ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನವನ್ನು ಜಾರಿಗೊಳಿಸಿ ಅಂತ ಒತ್ತಾಯಿಸಿದ್ದಾರೆ.
ಇನ್ನಾದರೂ ಸಿಎಂ ಸಿದ್ಧರಾಮಯ್ಯ ಅವರು ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವಂತ ನೌಕರರನ್ನು ಖಾಯಂಗೊಳಿಸುವ ಕ್ರಮ ವಹಿಸುತ್ತಾರಾ? ಹತ್ತಾರು ವರ್ಷಗಳಿಂದ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವವರಿಗೆ ಖಾಯಂ ಎನ್ನುವಂತ ಸಿಹಿಸುದ್ದಿ ನೀಡುತ್ತಾರಾ ಅಂತ ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: ಆ.1ರಿಂದ ‘ಆರೋಗ್ಯ ಇಲಾಖೆ’ಯ ನೌಕರರು ‘ರಿಯಲ್ ಟೈಮ್ ಅಟೆಂಡೆನ್ಸ್ ಸಿಸ್ಟಮ್ ಹಾಜರಾತಿ’ ದಾಖಲು ಕಡ್ಡಾಯ