ಬೆಂಗಳೂರು: ಅಯುಷ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು. ಸೋಮವಾರ ವಿಧಾನ ಪರಿಷತ್ತಿನ ಕಲಾಪದ ವೇಳೆ, ವಿಧಾನ ಪರಿಷತ್ತಿನ ಸದಸ್ಯರಾದ ಹೆಚ್.ಎಸ್. ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗ ಉತ್ತರಿಸಿದ ಸಚಿವರು, ಆಯುಷ್ ಇಲಾಖೆಯಲ್ಲಿ ಮಂಜೂರಾದ 903 ವೈದ್ಯಾಧಿಕಾರಿಗಳ ಪೈಕಿ 677 ವೈದ್ಯಾಧಿಕಾರಿಗಳು ಮತ್ತು 158 ಸ್ನಾತಕೋತ್ತರ ಪದವಿ ಪಡೆದಿರುವ ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 726 ಚಿಕಿತ್ಸಾಲಯಗಳು, 168 ಆಸ್ಪತ್ರೆಗಳು 03 ಐವತ್ತು ಆಸಿಗೆಯುಳ್ಳ ಆಸ್ಪತ್ರೆಗಳು 01 ಹೈ-ಟೆಕ್ ಪಂಚಕರ್ಮ ಆಸ್ಪತ್ರೆ ಹಾಗೂ 07 ಆಯುಷ್ ಕಾಲೇಜಿಗೆ ಹೊಂದಿಕೊಂಡ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಎಲ್ಲಾ ವಿಧಾನ ಸಭಾ ವ್ಯಾಪ್ತಿಯಲ್ಲಿ ಆಯುಷ್ ಆಸ್ಪತ್ರೆಗಳು ಇರುತ್ತವೆ.
ಆಯುಷ್ ಮಂತ್ರಾಲಯವು ಭಾರತ ಸರ್ಕಾರವು ನಿಗದಿಪಡಿಸಿದ ನ್ಯಾಷನಲ್ ಲಿಸ್ಟ್ ಆಫ್ ಎಸೆನ್ಸಿಯಲ್ ಆಯುಷ್ ಮೆಡಿಸಿನ್ನಲ್ಲಿ ಸೂಚಿಸಿರುವ ಔಷಧಿಗಳಾದ ದ್ರಾಕ್ಷಾಸವ, ತಿಫಲಾ ಚೂರ್ಣ, ಪಿಪ್ಪಿಲಿ ಚೂರ್ಣ, ಬಾಹ್ಮಿ ವಟಿ, ನವಾಯಸ ಲೋಹ, ಕಷಾಯ ಕಲ್ಪನಗಳು, ಆಸವ ಕಲ್ಪನಗಳು, ಗುಟಿಕ ಕಲ್ಪನ ಚೂರ್ಣ ಕಲ್ಪನ, ತೈಲ ಕಲ್ಪನಗಳು ಇತ್ಯಾದಿಗಳನ್ನು ರಾಜ್ಯ ವಲಯ, ಜಿಲ್ಲಾ ವಲಯ ಮತ್ತು ರಾಷ್ಟ್ರೀಯ ಆಯುಷ್ ಅಭಿಯಾನದ ಯೋಜನೆಗಳಡಿ ಔಷಧಿಗಳಿಗಾಗಿ ನಿಗದಿಯಾದ ಅನುದಾನದಲ್ಲಿ ಆಸ್ಪತ್ರೆ / ಚಿಕಿತ್ಸಾಲಯಗಳಿಗೆ ಬೇಡಿಕೆಗನುಸಾರ ಕಾಲ ಕಾಲಕ್ಕೆ ನಿಯಮಾನುಸಾರ ಖರೀದಿಸಿ ಸರಬರಾಜು ಮಾಡಲಾಗಿದೆ.
ಸರ್ಕಾರಿ ಆಯುಷ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳು / ಸಿಬ್ಬಂದಿಗಳು ದೈನಂದಿನ ಹಾಜರಾತಿಯನ್ನುತಿಳಿದುಕೊಳ್ಳಲು ಹಾಗೂ ಮೇಲ್ವಿಚಾರಣೆ ಮಾಡಲು ಆನ್ಲೈನ್ ಮುಖಾಂತರ ಇ-ಹಾಜರಾತಿ ಪ್ರಕ್ರಿಯೆಯನ್ನು ಈಗಾಗಲೇ ಸಿದ್ದಪಡಿಸಿದ್ದು, ಪ್ರತಿ ವೈದ್ಯರುಗಳು, ಸಿಬ್ಬಂದಿಗಳ ಅನಧಿಕೃತ ಗೈರು ಹಾಜರಾತಿಯ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಗೈರು ಹಾಜರಾಗಿದ್ದು ಕಂಡುಬಂದ ಪ್ರಕರಣಗಳಲ್ಲಿ ನಿಯಮನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ದೀರ್ಘಾವಧಿಯ ಗೈರು ಹಾಜರಾಗಿರುವ 03 ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಅರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ / ನೌಕರರ ಹಾಜರಾತಿಯನ್ನು ಮೊಬೈಲ್ ಆಪ್ ಮೂಲಕ ನಿರ್ವಹಿಸುವಂತೆ ಕಡ್ಡಾಯಗೊಳಿಸಲಾಗಿರುತ್ತದೆ ಎಂದು ತಿಳಿಸಿದರು.