ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ,ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕೃತವಾಗಿ ಆದೇಶ ಹೊರಡಿಸಿದೆ. ಸಿಎಂ ಸಿದ್ಧರಾಮಯ್ಯ ಅವರು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದ ನಂತ್ರ, ಸದನದಲ್ಲೂ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೊಳಿಸಲಾಗುವುದು ಅಂತ ಸ್ಪಷ್ಟ ಪಡಿಸಿದ್ದ ಬೆನ್ನಲ್ಲೇ, ಈ ಆದೇಶ ಮಾಡಲಾಗಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯಿಂದ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ದಿನಾಂಕ 01-07-2022ರಿಂದಲೇ ವೇತನ ಜಾರಿಗೊಳಿಸಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯನ್ನು ನೀಡಲಾಗಿದೆ.
ರಾಜ್ಯ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹೊರಡಿಸಿರುವಂತ ಆದೇಶದಲ್ಲಿ, ದಿನಾಂಕ: 19.11.2022ರ ಆದೇಶದಲ್ಲಿ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಕುರಿತಂತೆ ತನ್ನ ವರದಿಯ ಸಂಪುಟ-1 ನ್ನು ಸಲ್ಲಿಸಿರುತ್ತದೆ. 7ನೇ ರಾಜ್ಯ ವೇತನ ಆಯೋಗದ ಸಂಪುಟ- ರ ವರದಿಯಲ್ಲಿನ ಶಿಫಾರಸ್ಸುಗಳನ್ನು ಸರ್ಕಾರವು ಪರಿಗಣಿಸಿರುತ್ತದೆ. ಅದರಂತೆ, ಈ ಕೆಳಕಂಡ ಆದೇಶಗಳನ್ನು ಹೊರಡಿಸಿದೆ ಅಂತ ತಿಳಿಸಿದ್ದಾರೆ.
ಮುಖ್ಯ ವೇತನ ಶ್ರೇಣಿ ಮತ್ತು ಸ್ಥಾಯಿ ವೇತನ ಶ್ರೇಣಿಗಳ ಪರಿಷ್ಕರಣೆ ಬಗ್ಗೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಅಂಗೀಕರಿಸಿರುತ್ತದೆ. ಅದರಂತೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ದಿನಾಂಕ: 01.07.202280 ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಸರ್ಕಾರವು ಹರ್ಷಿಸುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ವೇತನ ಶ್ರೇಣಿ ಜಾರಿ
ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಈ ಕೆಳಕಂಡಂತೆ ವೇತನವನ್ನು ನಿಗದಿಪಡಿಸತಕ್ಕದ್ದು:- (ಅ) ದಿನಾಂಕ: 01.07.2022 ರಲ್ಲಿದ್ದಂತೆ ಮೂಲ ವೇತನ.
(ಆ) ದಿನಾಂಕ: 01.07.2022 ರಲ್ಲಿದ್ದಂತಹ ಬೆಲೆ ಸೂಚ್ಯಂಕ ಹಂತ 361.704 ಕ್ಕೆ ಸಂವಾದಿಯಾಗಿ ಲಭ್ಯವಿದ್ದ 31% ತುಟ್ಟಿ ಭತ್ಯೆ.
(ಇ) ದಿನಾಂಕ: 01.07.2022 ರಲ್ಲಿ ಲಭ್ಯವಿದ್ದ ಮೂಲ ವೇತನದ ಮೇಲೆ 27.50% ರಷ್ಟು ಫಿಟ್ಮೆಂಟ್ ಸೌಲಭ್ಯ.
(ಈ) ಮೇಲಿನ (ಅ), (ಆ), (ಇ) ಯನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ
ನಿಗದಿಪಡಿಸುವುದು. ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಆರ್ಥಿಕ ಸೌಲಭ್ಯವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು.
4. ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲು ಸರ್ಕಾರವು ಹರ್ಷಿಸುತ್ತದೆ. ಅದರಂತೆ, ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯ ಪ್ರಸ್ತುತ ಮೊತ್ತವನ್ನು ಕ್ರಮವಾಗಿ ಮಾಸಿಕ ರೂ.8,500/- ಮತ್ತು ರೂ.75,300/- ರಿಂದ ರೂ.13,500/- ಮತ್ತು ರೂ.1,20,600/- ಗಳಿಗೆ ಮತ್ತು ಸಂವಾದಿ ಕುಟುಂಬ ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಅನುಕ್ರಮವಾಗಿ ಮಾಸಿಕ ರೂ.8,500/- ಮತ್ತು ರೂ.45,180/- ರಿಂದ ಮತ್ತು ರೂ.13,500/- ಮತ್ತು ರೂ.80,400/-ಗಳಿಗೆ ಪರಿಷ್ಕರಿಸತಕ್ಕದ್ದು. ಪರಿಷ್ಕೃತ ಪಿಂಚಣಿ ಮತ್ತು ಕುಟುಂಬ ಪಿಂಚಣಿಗಳು ದಿನಾಂಕ: 01.07.2022 ರಿಂದ ಜಾರಿಗೆ ಬರುತ್ತವೆ. ಆದರೆ, ಪಿಂಚಣಿ ಪರಿಷ್ಕರಣೆಯ ಆರ್ಥಿಕ ಲಾಭವು ದಿನಾಂಕ: 01.08.2024 ರಿಂದ ಪ್ರಾಪ್ತವಾಗತಕ್ಕದ್ದು. ಮರಣ ಮತ್ತು ನಿವೃತ್ತಿ ಉಪದಾನದ ಪ್ರಸ್ತುತ ಗರಿಷ್ಠ ಮಿತಿ ರೂ.20 ಲಕ್ಷಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
5. ದಿನಾಂಕ: 01.07.2022 ಕ್ಕೆ ಪೂರ್ವದಲ್ಲಿ ನಿವೃತ್ತರಾದ ಅಥವಾ ಸೇವೆಯಲ್ಲಿದ್ದಾಗ ಮೃತರಾದ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಈ ಕೆಳಗಿನಂತೆ
ಸರ್ಕಾರಿ ನೌಕರರ ನಿಗದಿಪಡಿಸತಕ್ಕದ್ದು:-
ಅ) ದಿನಾಂಕ: 01.07.2022 ರಂದು ಇದ್ದ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ;
ಆ) ದಿನಾಂಕ: 01.07.2022 ರಂದು ಲಭ್ಯವಿದ್ದ 31% ರಷ್ಟು ತುಟ್ಟಿ ಭತ್ಯೆ.
ಇ) ದಿನಾಂಕ: 01.07.2022 ರಂದು ಇದ್ದ ನಿವೃತ್ತಿ ವೇತನ/ಕುಟುಂಬ ವೇತನದ ಮೇಲೆ 27.50% ರಷ್ಟು ಫಿಟ್ಮೆಂಟ್ ಸೌಲಭ್ಯ.
ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಈ ಮೇಲಿನ (ಅ) + (ಆ) + (ಇ) ರ ಒಟ್ಟಾರೆ ಮೊತ್ತವು ಮಾಹೆಯಾನ ರೂ.13,500/- ಗಳ ಕನಿಷ್ಠ ಪಿಂಚಣಿಗೆ ಕಡಿಮೆ ಇಲ್ಲದಂತೆ ಮತ್ತು ನಿವೃತ್ತಿ ವೇತನವು ಗರಿಷ್ಠ ಮಾಹೆಯಾನ ರೂ.1,20,600/- ರ ಮಿತಿಗೆ ಹಾಗೂ ಕುಟುಂಬ ನಿವೃತ್ತಿ ವೇತನದ ಗರಿಷ್ಠ ಮೊತ್ತವು ಮಾಹೆಯಾನ ರೂ.80,400/- ಮಿತಿಗೆ ಒಳಪಟ್ಟಿರುತ್ತದೆ. ಈ ಪರಿಷ್ಕೃತ ಪಿಂಚಣಿಯ ಆರ್ಥಿಕ ಲಾಭವು ದಿನಾಂಕ: 01.08.20224 ರಿಂದ ಪ್ರಾಪ್ತವಾಗತಕ್ಕದ್ದು ಎಂದಿದ್ದಾರೆ.
6. ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಸಂಬಂಧಿತ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆಗಳ ಪರಿಷ್ಕರಣೆಯ ಶಿಫಾರಸ್ಸು ಮತ್ತು ಪರಿಷ್ಕೃತ ವೇತನ ಹಾಗೂ ಪರಿಷ್ಕೃತ ಪಿಂಚಣಿಯಲ್ಲಿ ತುಟ್ಟಿ ಭತ್ಯೆ ಲೆಕ್ಕಾಚಾರ ಮಾಡಲು ಶಿಫಾರಸ್ಸು ಮಾಡಲಾದ ಪರಿಷ್ಕೃತ ಸೂತ್ರಕ್ಕೆ ಸಂಬಂಧಿಸಿದ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಭಾರ ಭತ್ಯೆ ಮಂಜೂರಾತಿಯ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
7. ನೌಕರರ ಸಾಮೂಹಿಕ ವಿಮಾ ಯೋಜನೆಗೆ ನೌಕರರ ವಂತಿಗೆ ಹೆಚ್ಚಳದ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
8. ಅನ್ವಯಿಸುವ ಬದಲಾವಣೆಯೊಂದಿಗೆ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ವಿಸ್ತರಿಸಲು ಸರ್ಕಾರವು ಹರ್ಷಿಸುತ್ತದೆ ಎಂದಿದ್ದಾರೆ.
9. ಮುಂದುವರೆದು, ಈ ಮೇಲಿನಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ: 01.08.2024ರಿಂದ ನಗದಾಗಿ ಪಾವತಿ ಮಾಡತಕ್ಕದ್ದು. ದಿನಾಂಕ: 01.07.2022 ರಿಂದ 31.07.2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು. ಆದರೆ, ಸದರಿ ಕಾಲ್ಪನಿಕ ಪುನರ್ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರನ ಫಲಾನುಭವಿಗೆ ಸಂದರ್ಭಾನುಸಾರ ದಿನಾಂಕ: 01.08.2024 ರಿಂದ ಪ್ರಾಪ್ತವಾಗತಕ್ಕದ್ದು ಎಂದಿದ್ದಾರೆ.
10. ಪರಿಷ್ಕೃತ ವೇತನ ಶ್ರೇಣಿಗಳ ಹಂಚಿಕೆ ಮತ್ತು ಅದರಲ್ಲಿ ವೇತನ ಹಾಗೂ ನಿವೃತ್ತಿ ವೇತನವನ್ನು ಕ್ರಮಬದ್ಧಗೊಳಿಸುವ ಕುರಿತು, ಸರ್ಕಾರದಿಂದ ವಿವರವಾದ ನಿಯಮ ಮತ್ತು ಆದೇಶಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಅಂತ ತಿಳಿಸಿದ್ದಾರೆ. ಈ ಮೂಲಕ ಜಾತಕ ಪಕ್ಷಿಯಂತೆ ಕಾಯುತ್ತಿದ್ದಂತ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನವನ್ನು ದಿನಾಂಕ 01-07-2022ರಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು