ಬೆಂಗಳೂರು : ರಾಜ್ಯ ಸರ್ಕಾರವು ಬಡಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಮತ್ತೆ 252 ಹೊಸ ‘ನಮ್ಮ ಕ್ಲಿನಿಕ್’ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ದಿನೇಶ್ ಗುಂಡೂರಾವ್, ಜನಸಾಮಾನ್ಯರಿಗೆ ಸಕಾಲದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ‘ನಮ್ಮ ಕ್ಲಿನಿಕ್’ ಗಳ ಪಾತ್ರ ಮಹತ್ವದ್ದಾಗಿದೆ. ರಾಜ್ಯಾದ್ಯಂತ ಒಟ್ಟು 503 ನಮ್ಮ ಕ್ಲಿನಿಕ್ ಗಳು ಈಗಾಗಲೇ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿವೆ ಎಂದು ತಿಳಿಸಿದ್ದಾರೆ.
ಬಡಜನತೆಗೆ ನೇರವಾಗಿ ತಲುಪುವ ಈ ‘ನಮ್ಮ ಕ್ಲಿನಿಕ್’ಗಳ ಸಂಖ್ಯೆಯನ್ನು ಹೆಚ್ಚಿಸಲು ನಮ್ಮ ಸರ್ಕಾರವು ನಿರ್ಧರಿಸಿದ್ದು ಈಗಿರುವ ಕ್ಲಿನಿಕ್ ಗಳ ಜೊತೆಗೆ ಇನ್ನೂ 252 ಹೊಸ ‘ನಮ್ಮ ಕ್ಲಿನಿಕ್’ಗಳನ್ನು ಆರಂಭಿಸಲಿದ್ದೇವೆ. ಇದಕ್ಕಾಗಿ ಈಗಾಗಲೇ ಜಾಗ ಮತ್ತಿತರೇ ಸೌಲಭ್ಯ ಗುರುತಿಸುವ ಕಾರ್ಯ ಭರದಿಂದ ಸಾಗಿದೆ. ಇದಲ್ಲದೇ ನಮ್ಮ ಕ್ಲಿನಿಕ್’ಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರ ವೇತನವನ್ನೂ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಹಾಗು ಜನತೆಗೆ ಅನುಕೂಲವಾಗುವಂತೆ ನಮ್ಮ ಕ್ಲಿನಿಕ್’ಗಳ ಕಾರ್ಯನಿರ್ವಹಣಾ ಸಮಯದಲ್ಲೂ ಬದಲಾವಣೆ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.