ಬೆಂಗಳೂರು : ಮಕ್ಕಳ ಬ್ಯಾಗ್ ಹೊರೆ ಕಡಿಮೆಮಾಡಲು ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಪ್ರತಿ ತಿಂಗಳ ಮೂರನೇ ಶನಿವಾರದಂದು ಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನವನ್ನು ಆಚರಿಸಲು ಸೂಚನೆ ನೀಡಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಸಂತಸದಾಯಕ ವಾಗಿಸುವ ನಿಟ್ಟಿನಲ್ಲಿ ಮತ್ತು ಮಕ್ಕಳ ಕುರಿತಾದ ಕಾಳಜಿಯಿಂದ ಶಾಲಾ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಲು ಚಟುವಟಿಕೆಗಳನ್ನೊಳಗೊಂಡ ಮಾರ್ಗಸೂಚಿಗಳನ್ನು ರೂಪಿಸಿ, ಉಲ್ಲೇಖ-4 ರನ್ವಯ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಮಾಡ್ಯೂಲ್‌ನಲ್ಲಿನ ಚಟುವಟಿಕೆಗಳನುಸಾರ ಪ್ರತಿ ಮಾಹೆಯ 3 ನೇ ಶನಿವಾರದಂದು “ಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನ”ವನ್ನು ಆಚರಿಸಲು ಉಲ್ಲೇಖ 5 ರ ಅನ್ವಯ ಸೂಚನೆ ನೀಡಲಾಗಿರುತ್ತದೆ.
ಈ ಸಂಬಂಧ ಸರ್ಕಾರ/ಇಲಾಖೆಯ ಆದೇಶಗಳ ಪಾಲನೆ ಮತ್ತು ಅನುಪಾಲನೆ ಸಂಬಂಧ ಉಲ್ಲೇಖ-6 ರಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಾಲಾ ಬ್ಯಾಗ್ ಹೊರೆ ಕಡಿತಗೊಳಿಸುವ ಕ್ರಮಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಶಾಲಾ ಭೇಟಿ ಹಾಗೂ ಪರಿಶೀಲನೆ ಮೂಲಕ ಖಾತ್ರಿಪಡಿಸಿಕೊಳ್ಳಲು ನಿರ್ದೇಶನವನ್ನು ನೀಡಲಾಗಿರುತ್ತದೆ.
ಆದಾಗ್ಯೂ ಅನೇಕ ಶಾಲೆಗಳಲ್ಲಿ ಮಕ್ಕಳು ಶಾಲಾ ಬ್ಯಾಗ್ ಹೊರೆಯನ್ನು ಅನುಭವಿಸುತ್ತಿರುವ ಕುರಿತು ದೂರುಗಳು (ಉಲ್ಲೇಖ-3) ಇಲಾಖೆಯಲ್ಲಿ ಸ್ವೀಕೃತವಾಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡುವ ಕುರಿತು ಸರ್ಕಾರ/ಇಲಾಖೆಯು ಹೊರಡಿಸಿರುವ ನಿಗದಿತ ಮಾರ್ಗಸೂಚಿ ಮತ್ತು ಆದೇಶದ ಅನುಪಾಲನೆ ಕುರಿತು ಪರಿಶೀಲನೆ ನಡೆಸಿ ಎಲ್ಲಾ ಶಾಲೆಗಳು ಸದರಿ ನಿರ್ದೇಶನಗಳನ್ನು ಅನುಸರಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮತ್ತು ವಿಫಲವಾಗಿರುವ ಶಾಲೆಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲು ಹಾಗೂ ಈ ಬಗ್ಗೆ ವರದಿಯನ್ನು ದಿನಾಂಕ: 12/08/2024ರೊಳಗೆ DSERT ಕಛೇರಿಗೆ ಸಲ್ಲಿಸಲು ತಿಳಿಸಿದೆ.