ಶಿವಮೊಗ್ಗ : ಪ್ರಕಾಶ್.ಜಿ.ಎನ್. ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ರವರು ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕಾಶ್.ಜಿ.ಎನ್. ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ರವರು ಅಕ್ರಮ ಆಸ್ತಿಗಳಿಸಿರುವ ಪ್ರಕರಣದ ತನಿಖೆ ಕೈಗೊಂಡು ಪ್ರಕಾಶ್ ಜಿ.ಎನ್ ರವರಿಗೆ ಸಂಬಂಧಿಸಿದ 3 ಸ್ಥಳಗಳಲ್ಲಿ ದಿ:19/07/2024 ರಂದು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಶೋಧನೆ ಮಾಡಿದ್ದು, ಪ್ರಕಾಶ್ ಜಿ.ಎನ್ ರವರಿಗೆ ಸಂಬಂದಿಸಿದಂತೆ 1 ಖಾಲಿ ನಿವೇಶನ, 2 ಮನೆಗಳು, 2.8 ಎಕರೆ ಕೃಷಿ ಜಮೀನು ಅಂದಾಜು ಸ್ಥಿರಾಸ್ಥಿ ಮೌಲ್ಯ ರೂ 1,57,00,000/- ಕಂಡು ಬಂದಿರುತ್ತದೆ. ಹಾಗೂ ಅವರ ವಾಸದ ಮನೆಯಲ್ಲಿ ರೂ 38,32,630/- ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು 5,20,000/-ರೂ ಮೌಲ್ಯದ ವಾಹನಗಳು, ಅಂದಾಜು 11,30,000/-ರೂ ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ 12,86,500/- ನಗದು ಹಣ ಪತ್ತೆಯಾಗಿರುತ್ತದೆ.
ಈ ತನಿಖೆಯನ್ನು ಮುಂದುವರೆಸಿದ್ದು, ದಿ:20/07/2024 ರಂದು ಪ್ರಕಾಶ್ ಜಿ.ಎನ್ ರವರ ಪತ್ನಿ ಹೆಸರಿನಲ್ಲಿದ್ದ ಬ್ಯಾಂಕ್ ಲಾಕರ್ನ್ನು ಶೋಧನೆ ಮಾಡಲಾಗಿ ಈ ಬ್ಯಾಂಕ್ ಲಾಕರ್ನಲ್ಲಿ ರೂ,32,06,000/- ನಗದು ಹಣ ಮತ್ತು ಅಂದಾಜು ರೂ 18,48,200/- ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿರುತ್ತದೆ. ಈ ಅಧಿಕಾರಿಯು ಅಂದಾಜು 2,05,23,330/- ರೂ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ. ಹಾಗೂ ಅವರ ಮನೆ ಮತ್ತು ಲಾಕರ್ ನಲ್ಲಿ ಪತ್ತೆಯಾದ ನಗದು ರೂ 44,06,000/- ಗಳನ್ನು ತನಿಖೆ ಸಂಬಂದ ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣವನ್ನು ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್. ರವರು ದಾಖಲಿಸಿದ್ದು, ಹೆಚ್.ಎಸ್.ಸುರೇಶ್ ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರು ತನಿಖೆಯನ್ನು ಮುಂದುವರೆಸಿರುತ್ತಾರೆ.
ಈ ದಾಳಿ ಸಮಯಕ್ಕೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸ್ ಪ್ರಕಟಣೆ ತಿಳಿಸಿದೆ.
ಬೆಂಗಳೂರಲ್ಲಿ ಪ್ರಾಯೋಗಿಕವಾಗಿ ‘250 ಮಾಂಟೆಸ್ಸರಿ’ಗಳಿಗೆ ಚಾಲನೆ: ರಾಜ್ಯಾದ್ಯಂತ ‘5,000 LKG, UKG ಶಾಲೆ’ ಆರಂಭ
ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ: ಡಿಕೆಶಿ ಕುಟುಕಿದ ಕೇಂದ್ರ ಸಚಿವ HDK