ಬೆಂಗಳೂರು: ವಿದ್ಯುತ್ ಬಿಲ್ ನಲ್ಲಿರುವ ಹೆಚ್ಚುವರಿ ಭದ್ರತಾ ಠೇವಣಿ (ASD) ಕುರಿತು ಗ್ರಾಹಕರ ಗೊಂದಲಕ್ಕೆ ಒಳಗಾಗಿದ್ದರು. ಈ ಬಗ್ಗೆ BESCOM ಪತ್ರಿಕಾ ಹೇಳಿಕೆಯಲ್ಲಿ ಈ ಕೆಳಗಿನಂತೆ ಸ್ಪಷ್ಟನೆ ಕೊಟ್ಟಿದೆ.
-ನೂತನ ಗ್ರಾಹಕರ ವಿದ್ಯುತ್ ಬೇಡಿಕೆಯನ್ನು ಆಧರಿಸಿ, ಹೆಚ್ಚುವರಿ ಭದ್ರತಾ ಠೇವಣಿ (ASD – Additional Security Deposit) ಯನ್ನು ನಿರ್ಧರಿಸಲಾಗುತ್ತದೆ ಹಾಗೂ ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ, ಗ್ರಾಹಕರ ಹಿಂದಿನ ವಾರ್ಷಿಕ ಸರಾಸರಿ ಬಳಕೆಯನ್ನು ಆಧರಿಸಿ, ಗ್ರಾಹಕರು ಹೆಚ್ಚುವರಿ ಭದ್ರತಾ ಠೇವಣಿಯನ್ನು ಪಾವತಿಸಬೇಕೇ ಅಥವಾ ಅವರ ಬೇಡಿಕೆ ಕಡಿಮೆಯಿದ್ದಲ್ಲಿ ಗ್ರಾಹಕರಿಗೆ ಮರುಪಾವತಿಸಬೇಕೇ ಎನ್ನುವುದನ್ನು ಬೆಸ್ಕಾಂ ನಿರ್ಧರಿಸುತ್ತದೆ.
– ಗ್ರಾಹಕರ ಹೆಚ್ಚುವರಿ ಭದ್ರತಾ ಠೇವಣಿಗೆ, ನೂತನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದಲ್ಲಿ ಠೇವಣಿಯ ಮೇಲಿನ ಬಡ್ಡಿ (IOD – Interest On Deposit) ಯನ್ನು ಗ್ರಾಹಕರ ಖಾತೆಗೆ ಪಾವತಿಸಲಾಗುತ್ತದೆ.
– ಪ್ರಸ್ತುತ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ, ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರಿಗೆ ಅವರ ಖಾತೆಯಲ್ಲೇ ಭದ್ರತಾ ಠೇವಣಿಯ ಬಡ್ಡಿ ಹಣ ಜಮಾ ಆಗಿರುತ್ತದೆ. ಗ್ರಾಹಕರು ಶೂನ್ಯ ಬಿಲ್‌ನಿಂದ ಹೊರಬಂದಾಗ, ಅವರ ಖಾತೆಯಲ್ಲಿ ಜಮೆಯಾಗಿರುವ ಬಡ್ಡಿಯ ಹಣವನ್ನು ವಿದ್ಯುತ್ ಶುಲ್ಕದೊಂದಿಗೆ ಹೊಂದಿಸಲಾಗುತ್ತದೆ.
– ಹೆಚ್ಚುವರಿ ಭದ್ರತಾ ಠೇವಣಿಯು ಯಾವುದೇ ರೀತಿಯ ತೆರಿಗೆ ಅಥವಾ ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡುವ ಮೊತ್ತವಲ್ಲ. ಬದಲಾಗಿ, ಗ್ರಾಹಕರ ವಿದ್ಯುತ್ ಬಳಕೆಗೆ ಅನುಗುಣವಾಗಿ, ಅವರ ವಾರ್ಷಿಕ ಸರಾಸರಿ ಬಳಕೆಯನ್ನು ಆಧರಿಸಿ, ನಿರ್ಧರಿಸಲಾಗುವ ಭದ್ರತಾ ಠೇವಣಿ. ವರ್ಷಾಂತ್ಯದಲ್ಲಿ ಆ ಠೇವಣಿ ಹಣಕ್ಕೆ ಗ್ರಾಹಕರಿಗೇ ಬಡ್ಡಿಯ ಲಾಭಾಂಶ (IOD) ನೀಡಲಾಗುತ್ತದೆ.
– ಜೂನ್ ತಿಂಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚು ವಿದ್ಯುತ್ ಬಿಲ್ ಬರುವ ಯಾವುದೇ ಕಾರಣಗಳು ಇಲ್ಲವಾಗಿದ್ದು, ವಿದ್ಯುತ್ ಬಿಲ್ ಗೃಹಜ್ಯೋತಿಯಡಿ ಶೂನ್ಯವಾಗಿದ್ದೂ, ನಿಮ್ಮ ವಿದ್ಯುತ್ ಬಿಲ್‌ನಲ್ಲಿ ಋಣಾತ್ಮಕ (-) ಮೊತ್ತ ನಮೂದಾಗಿದ್ದರೆ, ಅದು ಜೂನ್ ತಿಂಗಳ ಅಂತ್ಯದಲ್ಲಿ ನಿಮ್ಮ ಹೆಚ್ಚುವರಿ ಭದ್ರತಾ ಠೇವಣಿಗೆ ಬೆಸ್ಕಾಂ ನೀಡುವ ಬಡ್ಡಿದರವಾಗಿದೆ. ಅದನ್ನು ಮುಂದೆ ಶೂನ್ಯ ಬಿಲ್‌ನಿಂದ ಹೊರಬಂದಾಗ, ವಿದ್ಯುತ್ ಶುಲ್ಕಕ್ಕೆ ಸರಿಹೊಂದಿಸಲಾಗುವುದು. ಈ ಋಣಾತ್ಮಕ (-) ಮೊತ್ತವನ್ನು ಗ್ರಾಹಕರು ಪಾವತಿಸಬೇಕಿರುವುದಿಲ್ಲ (ಶೂನ್ಯ ಬಿಲ್ ಇದ್ದರೆ, ಬಿಲ್‌ನ ಕೆಳಭಾಗದಲ್ಲಿ, ಠೇವಣಿ ಮೇಲಿನ ಬಡ್ಡಿ IOD ಎಂದು ಋಣಾತ್ಮಕ ಮೊತ್ತವನ್ನು ನಮೂದಿಸಲಾಗಿರುತ್ತದೆ.)
– ಕೆ.ಇ.ಆರ್.ಸಿ ಆದೇಶಗಳನ್ವಯ, ಗ್ರಾಹಕರ ಹೆಚ್ಚುವರಿ ಭದ್ರತಾ ಠೇವಣಿಯನ್ನು ಅವರ ವಾರ್ಷಿಕ ವಿದ್ಯುತ್ ಬಳಕೆಯ ಸರಾಸರಿಯನ್ನು ಆಧರಿಸಿ ನಿರ್ಧರಿಸಬೇಕಿದ್ದು, ಬೇಡಿಕೆಗಿಂತ ಸರಾಸರಿ ಕಡಿಮೆಯಿದ್ದಲ್ಲಿ, ಗ್ರಾಹಕರಿಗೆ ಭದ್ರತಾ ಠೇವಣಿ ಹಣವನ್ನು ಮರುಪಾವತಿಸಲಾಗುತ್ತದೆ ಅಥವಾ ಸರಾಸರಿಯು ಬೇಡಿಕೆಗಿಂತ ಹೆಚ್ಚಿದ್ದಲ್ಲಿ, ಅದರನ್ವಯ ಬೇಡಿಕೆಯ ಭದ್ರತಾ ಠೇವಣಿಯನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ.
– ಇನ್ನು, ಹೆಚ್ಚುವರಿ ಭದ್ರತಾ ಠೇವಣಿಯನ್ನು ನಿರ್ಧರಿಸಿ, ಗ್ರಾಹಕರಿಗೆ ನೋಟಿಸ್ ನೀಡುವ ಜವಾಬ್ದಾರಿ ಆಯಾ ಉಪವಿಭಾಗಗಳಿಗೆ ಸಂಬಂಧಿಸಿದ್ದು, ಉಪವಿಭಾಗದಿಂದ ಸಹಾಯಕ ಅಭಿಯಂತರರು ನೋಟಿಸ್ ಹೊರಡಿಸುತ್ತಾರೆಯೇ ವಿನಃ, ಬೆಸ್ಕಾಂನ ನಿಗಮ ಕಚೇರಿಯ ಅಧಿಕೃತ ಜ್ಞಾಪನ ಪತ್ರದ ಮೂಲಕ ಈ ರೀತಿಯ ನೋಟಿಸ್ ನೀಡಲಾಗುವುದಿಲ್ಲ.
– ನೂತನವಾಗಿ ನಿರ್ಧರಿಸಲಾಗುವ ಭದ್ರತಾ ಠೇವಣಿಯನ್ನು ಆನ್‌ಲೈನ್ ಮೂಲಕವೂ ಪಾವತಿಸಬಹುದಾಗಿದ್ದು, ಬೆಸ್ಕಾಂ ಮಿತ್ರ ಮೊಬೈಲ್ ಆ್ಯಪ್ ಅಥವಾ ಬೆಸ್ಕಾಂನ ಅಧಿಕೃತ ವೆಬ್‌ಸೈಟ್ ಮೂಲಕ ಪಾವತಿಸಬಹುದಾಗಿದೆ
– ಬೆಸ್ಕಾಂಗೆ ಸರ್ಕಾರದ ಸಬ್ಸಿಡಿಗಳು ಕೇವಲ ಕೃಷಿ ಪಂಪ್‌ಸೆಟ್ ಹಾಗೂ ಗೃಹ ಜ್ಯೋತಿ ಯೋಜನೆಯಿಂದ ಮಾತ್ರ ಅನ್ವಯವಾಗುತ್ತಿದ್ದು, ಇತರೆ ಅನುದಾನವನ್ನು ಗ್ರಾಹಕರಿಗೆ ವಿದ್ಯುತ್ ಪೂರೈಕೆಯ ಮೊತ್ತದ ಮೂಲಕವೇ ಬೆಸ್ಕಾಂ ಪಡೆಯಬೇಕಿರುತ್ತದೆ.
– ಹೆಚ್ಚುವರಿ ಭದ್ರತಾ ಠೇವಣಿ (ASD) ಕುರಿತಾದ ಯಾವುದೇ ಗೊಂದಲಗಳಿದ್ದಲ್ಲಿ, ಬೆಸ್ಕಾಂನ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ಪರಿಹರಿಸಿಕೊಳ್ಳಬಹುದಾಗಿದೆ.