ಬೆಂಗಳೂರು: ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರ ಬೆಂಗಳೂರು ಮತ್ತು ರಾಯಚೂರಿನ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದಾಳಿ ಮುಂದುವರಿಸಿದ್ದು ಅವರನ್ನು ಇಡಿ ವಶಕ್ಕೆ ಪಡೆದಿದೆ.
ನಾಗೇಂದ್ರ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದಾಗ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆದಿವೆ. ಅವರು ಜೂನ್ ನಲ್ಲಿ ರಾಜೀನಾಮೆ ನೀಡಿದರು.
ಇಡಿ ಎಂಟಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧಗಳನ್ನು ಮುಕ್ತಾಯಗೊಳಿಸಿದೆ. ಬೆಂಗಳೂರಿನ ನಾಗೇಂದ್ರ ಮತ್ತು ದದ್ದಲ್ ಅವರ ಮನೆಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಬುಧವಾರ ಬೆಳಿಗ್ಗೆಯಿಂದ, ಇಡಿ ಇಬ್ಬರೂ ಕಾಂಗ್ರೆಸ್ ನಾಯಕರನ್ನು ತಮ್ಮ ಮನೆಗಳಿಂದ ಹೊರಬರದಂತೆ ನಿರ್ಬಂಧಿಸಿದೆ.
ವಸಂತನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ಗುರುವಾರ ಸಂಜೆಯವರೆಗೂ ಇಡಿ ಅಧಿಕಾರಿಗಳು ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಆವರಣದಿಂದ ಏನನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ನಾಗೇಂದ್ರ ಅವರ ಆಪ್ತ ಹರೀಶ್ ಅವರನ್ನು ಗುರುವಾರ ಮತ್ತೆ ವಶಕ್ಕೆ ಪಡೆದು ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಕರೆದೊಯ್ಯಲಾಯಿತು. ಅಧಿಕಾರಿಗಳು ದದ್ದಲ್ ಅವರ ಆಪ್ತ ಕಾರ್ತಿಕ್ ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.ಬುಧವಾರದ ದಾಳಿಯ ಹಿಂದಿನ ನಿಖರ ಕಾರಣ ಅಸ್ಪಷ್ಟವಾಗಿದ್ದರೂ, ಹಗರಣದ ಬಗ್ಗೆ ತನಿಖೆ ಕೋರಿ ಇಡಿಯಲ್ಲಿ ಎರಡು ದೂರುಗಳು ದಾಖಲಾಗಿವೆ ಎಂಬುದು ಗಮನಾರ್ಹವಾಗಿದೆ