ನವದೆಹಲಿ: ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ವೈಜಾಗ್ ಸ್ಟೀಲ್ ಕಾರ್ಖಾನೆ (RNIL)ಗೆ ಭೇಟಿ ನೀಡಲಿದ್ದಾರೆ.
ಬುಧವಾರ ಸಂಜೆಯೇ ವಿಶಾಖಪಟ್ಟಣಕ್ಕೆ ಆಗಮಿಸಿರುವ ಸಚಿವರು, ಗುರುವಾರ ಬೆಳಗ್ಗೆ ತಮ್ಮ ಖಾತೆಯ ಸಹಾಯಕ ಸಚಿವರು, ಆಂಧ್ರ ಪ್ರದೇಶದವರೇ ಆದ ಭೂಪತಿರಾಜು ಶ್ರೀನಿವಾಸ ವರ್ಮ ಹಾಗೂ ಉನ್ನತ ಅಧಿಕಾರಿಗಳ ಜತೆಗೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಈಗಾಗಲೇ ಕಂಪನಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನವದೆಹಲಿಯ ತಮ್ಮ ಸಚಿವಾಲಯದಲ್ಲಿ ಹಲವಾರು ಸಭೆಗಳನ್ನು ನಡೆಸಿರುವ ಸಚಿವರು, ತಾವೇ ಖುದ್ದು ವಿಶಾಖಪಟ್ಟಣಕ್ಕೆ ಬಂದು ಉಕ್ಕು ಕಾರ್ಖಾನೆಯನ್ನು ವೀಕ್ಷಿಸುತ್ತಿದ್ದಾರೆ.
ಆರ್ಥಿಕವಾಗಿ ಹಾಗೂ ಇನ್ನಿತರೆ ಕಾರಣಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಂಪನಿಯನ್ನು ಮೇಲೆತ್ತುವ ಬಗ್ಗೆ ಪ್ರಯತ್ನ ನಡೆಸಿರುವ ಸಚಿವರು; ಭೂಪತಿರಾಜು ಅವರ ಜತೆಯೂ ಹಲವು ಬಾರಿ ಚರ್ಚೆ ನಡೆಸಿದ್ದಾರೆ.
ಕುಮಾರಸ್ವಾಮಿ ಅವರು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರನ್ನು ಸಚಿವಾಲಯದಲ್ಲಿ ಭೇಟಿಯಾಗಿದ್ದ ಆಂಧ್ರ ಪ್ರದೇಶದ ಸಂಸದರು, ಬಿಜೆಪಿ ಹಿರಿಯ ನಾಯಕಿಯಾದ ಪುರಂದೇಶ್ವರಿ ಅವರು, ಹೇಗಾದರೂ ಮಾಡಿ ವೈಜಾಗ ಸ್ಟೀಲ್ ಕಂಪನಿಯನ್ನು ಪುನಶ್ಚೇತನಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಬಳಿಕ ಉಕ್ಕು ಸಚಿವಾಲಯದಲ್ಲಿ ಕಾರ್ಯದರ್ಶಿ ನಾಗೇಂದ್ರ ನಾಥ ಸಿನ್ಹಾ, ವೈಜಾಗ್ ಸ್ಟೀಲ್ ಚೇರಮನ್ ಅತುಲ್ ಭಟ್ ಸೇರಿ ಹಿರಿಯ ಅಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಿದ್ದರು ಸಚಿವರು. ಅಲ್ಲದೆ; ಮಂಗಳವಾರ ಸಚಿವಾಲಯದಲ್ಲಿ ಕಂಪನಿಗೆ ಸಾಲ ನೀಡಿರುವ ಬ್ಯಾಂಕುಗಳ ಜತೆಯೂ ಮಹತ್ವದ ಸಮಾಲೋಚನೆ ನಡೆಸಿದ್ದರು.
ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವರು; ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಬರ್ ಭಾರತ ಪರಿಕಲ್ಪನೆ ಸಂಕಷ್ಟದಲ್ಲಿರುವ ಕೈಗಾರಿಗಳ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಹಾಗೂ ಕಾರ್ಖಾನೆಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಶಿವಮೊಗ್ಗ: ನಾಳೆ ಸೊರಬದಲ್ಲಿ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಪ್ರಯುಕ್ತ ‘ಜಾಥಾ ಆಯೋಜನೆ’
ಹುಬ್ಬಳ್ಳಿ ನೇಹಾ ಕೊಲೆ ಕೇಸ್ : ಹತ್ಯೆಗೆ ‘ಲವ್ ಜಿಹಾದ್’ ಕಾರಣವಲ್ಲ : ಚಾರ್ಜ್ ಶೀಟ್ ನಲ್ಲಿ ಉಲ್ಲೇಖ!