ಬೆಂಗಳೂರು : ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಸಿಎಂ ಸಿದ್ದರಾಮಯ್ಯ ಶಾಕ್ ನೀಡಿದ್ದು, 91,000 ಜಮೀನುಗಳು ಒತ್ತವರಿಯಾಗಿರುವುದನ್ನು ಗುರುತಿಸಲಾಗಿದೆ. ಆಗಸ್ಟ್ ತಿಂಗಳಿನಿಂದ ಸರ್ವೇಯರುಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ 1.40 ಕೋಟಿ ಎಕರೆ ಸರ್ಕಾರಿ ಜಮೀನು ಇದ್ದು, ಲ್ಯಾಂಡ್ ಬೀಟ್ ಮೊಬೈಲ್ ತಂತ್ರಾಂಶದ ಮೂಲಕ ದತ್ತಾಂಶ ಸೃಜಿಸಲಾಗಿದೆ. 14.32 ಲಕ್ಷ ಸರ್ಕಾರಿ ಜಮೀನುಗಳ ಸ್ಥಳ ಪರಿಶೀಲನೆಗೆ ಸೂಚಿಸಲಾಗಿದೆ. ಈ ಪೈಕಿ 10.78 ಲಕ್ಷ ಜಮೀನುಗಳಿಗೆ ಗ್ರಾಮಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ 1.93 ಲಕ್ಷ ಜಮೀನುಗಳು ಇದ್ದು, ವಿವಿಧ 20 ಇಲಾಖೆಗಳ ಜಮೀನುಗಳನ್ನೂ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೆರೆ ಮತ್ತು ಸ್ಮಶಾನಗಳ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು, ಸಮೀಕ್ಷೆ ನಡೆಸಲಾಗಿದೆ. ಒಟ್ಟು 91,000 ಜಮೀನುಗಳು ಒತ್ತವರಿಯಾಗಿರುವುದನ್ನು ಗುರುತಿಸಲಾಗಿದೆ. ಆಗಸ್ಟ್ ತಿಂಗಳಿನಿಂದ ಸರ್ವೇಯರುಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಇತರ ಇಲಾಖೆಯವರೂ ಸಹ ತಮ್ಮ ಜಮೀನು ಎಲ್ಲಿದೆ ಹಾಗೂ ಒತ್ತುವರಿಯಾಗಿದೆಯೇ ಎಂಬ ಕುರಿತು ಪರಿಶೀಲಿಸಲು ಅವಕಾಶವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಆಸ್ತಿ ರಕ್ಷಣೆಗೆ ಎಸ್ಟೇಟ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ತಮ್ಮ ಇಲಾಖೆಗೆ ಹಂಚಿಕೆಯಾದ ಭೂಮಿಯ ಮಾಹಿತಿಯನ್ನು ಆರ್.ಟಿ.ಸಿ.ಯಲ್ಲಿ ಇಂದೀಕರಣ ಮಾಡಬೇಕು. ಹಾಗೂ ಒತ್ತುವರಿ ತೆರವುಗೊಳಿಸಿ, ತಮ್ಮ ಆಸ್ತಿಯನ್ನು ಸಂರಕ್ಷಿಸಬೇಕು. ಸರ್ಕಾರಿ ಜಮೀನು ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದರು.