ಬೆಂಗಳೂರು: ಪ್ರತಿ ಪಕ್ಷ ನಾಯಕ ಆರ್.ಅಶೋಕ್ ವಿರುದ್ಧ 2500 ಎಕರೆಯ ಭೂ ಹಗರಣವಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಆಗ್ರಹಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಸೋಲಿನಿಂದ ಕಂಗೆಟ್ಟ ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವು ಕರ್ನಾಟಕ ವಿಧಾನಸಭೆಗೆ ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸುಮಾರು ಆರು ತಿಂಗಳ ಕಾಲ ಹುಡುಕಾಟ ನಡೆಸಿ ಸಮರ್ಥರು ಸಿಗದ ಕಾರಣ ಹೊಂದಾಣಿಕೆ ಗಿರಾಕಿ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಿರುತ್ತದೆ. ತನ್ನ ಇತಿಹಾಸದಲ್ಲಿ ಅನೇಕ ಸಮರ್ಥ ವಿರೋಧ ಪಕ್ಷದ ನಾಯಕರನ್ನು ಕಂಡ ವಿಧಾನಸಭೆಯು, ಇಂದು ಸಮರ್ಥ ವಿರೋಧ ಪಕ್ಷದ ನಾಯಕರಿಲ್ಲದೆ ಸೊರಗುತ್ತಿದೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳನ್ನು ವೈಯಕ್ತಿಕ ನೆಲಗಟ್ಟಿನಲ್ಲಿ ತೆಗಳುವುದನ್ನೇ ಕಾಯಕ ಮಾಡಿಕೊಂಡಿರುವ ಆರ್.ಅಶೋಕ್ ಅವರು ತಾವು ಪಿಯುಸಿ ವ್ಯಾಸಂಗ ಮಾಡುವಾಗ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿರುವುದಾಗಿ ಹೇಳುತ್ತಾರೆ. ಅಪ್ರಾಪ್ತರನ್ನು ಜೈಲಿನಲ್ಲಿ ಇಡಲು ಕಾನೂನಿನಲ್ಲಿ ಅವಕಾಶವಿತ್ತೇ ಎಂಬುದನ್ನು ರಾಜ್ಯದ ಗೃಹ ಖಾತೆಯ ಮಾಜಿ ಸಚಿವ ಆರ್.ಅಶೋಕ್ ಅವರೇ ತಿಳಿಸಬೇಕು. ಇವರ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ಸಂಖ್ಯೆ BCD /563/2010 ಇಂದಿಗೂ ವಿಚಾರಣೆಗೆ ಬಾಕಿ ಇದ್ದು ಯಾವ ಕಾರಣಕ್ಕೆ ಪ್ರಕರಣ ಬಾಕಿ ಇದೆ ಎಂದು ವಿರೋಧ ಪಕ್ಷದ ನಾಯಕರು ಸಾರ್ವಜನಿಕವಾಗಿ ಉತ್ತರಿಸಬೇಕು. ತಮ್ಮ ಚುನಾವಣಾ ಪ್ರಮಾಣ ಪಾತ್ರದಲ್ಲಿ ಬಾಕಿ ಇರುವ ಅಪರಾಧ ಪ್ರಕರಣಗಳ ಕುರಿತು ಅಪೂರ್ಣ ಮಾಹಿತಿ ನೀಡಿರುವ ಮಾನ್ಯ ವಿರೋಧ ಪಕ್ಷದ ನಾಯಕರು, ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಕುರಿತು ಪೂರ್ಣ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ನಂದಿನಿ ಸಂಸ್ಥೆಯು ದೇಶದಲ್ಲೇ ಬೃಹದಾಕಾರವಾಗಿ ಬೆಳೆದಿರುವ ಒಂದು ಸಹಕಾರಿ ಸಂಸ್ಥೆಯಾಗಿದ್ದು, ಆಯಾ ಕಾಲಕ್ಕೆ ಅನುಗುಣವಾಗಿ ರೈತರ ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ಹಾಲು ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ತಮ್ಮ ರಾಜಕೀಯ ಮತ್ತು ವ್ಯಾಪಾರ ಲಾಭಕ್ಕಾಗಿ ನಂದಿನಿ ಸಂಸ್ಥೆಯನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಲು ಎಂದಿಗೂ ತಾಕತ್ತು ತೋರದ ಸಾಂದರ್ಭಿಕ ವಿರೋಧ ಪಕ್ಷದ ನಾಯಕ ಅಶೋಕ್ ರವರು ಹಾಲುದರದ ಬಗ್ಗೆ ಪ್ರಸ್ತಾಪಿಸುತ್ತಿರುವುದು ಅವರ ಅಪಕ್ವ ನಾಯಕತ್ವಕ್ಕೆ ಸಾಕ್ಷಿಯಾಗಿದೆ.. ಹಾಲು ಮಹಾಮಂಡಳಿಯಲ್ಲಿ ಬಿಜೆಪಿಯ ನಿರ್ದೇಶಕರು ಅಧಿಕಾರದಲ್ಲಿದ್ದು, ಪ್ರಾಮಾಣಿಕವಾಗಿ ಹಾಲು ದರದ ಪರಿಷ್ಕರಣೆಯನ್ನು ವಿರೋಧಿಸುವುದಾದರೆ ಮೊದಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಬಿ ಎಂ ಕಾವಲು ಗ್ರಾಮದ ಗೋಮಾಳ ಜಮೀನಿನ ಅಕ್ರಮ ಹಂಚಿಕೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ಹೆಸರು ತಳಿಕೆ ಹಾಕಿಕೊಂಡಿದ್ದು, ಇವರ ವಿರುದ್ಧ ದಾಖಲಾಗಿದ್ದ ಕ್ರೈಮ್ ಸಂಖ್ಯೆ 5/2018 ರ ಪ್ರಕರಣವನ್ನು ರದ್ದು ಮಾಡಲು ಕೋರಿ ರಿಟ್ ಪಿಟಿಷನ್ ಸಂಖ್ಯೆ 1775/2018 ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣ ಇವರ ವಿರುದ್ಧವಾಗಿ ವಜಾಗೊಂಡಿರುತ್ತದೆ. ತದನಂತರ ಇವರು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಬಾಕಿ ಪ್ರಕರಣ ಕುರಿತು ಒಬ್ಬ ವಿರೋಧ ಪಕ್ಷದ ನಾಯಕರಾಗಿ ಅಶೋಕ್ ರವರು ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸಬೇಕು. ಇದೇ ಬಗರ್ ಹುಕುಂ ಪ್ರಕರಣದಲ್ಲಿ ಮಾಧ್ಯಮಗಳು ತಮ್ಮ ವಿರುದ್ಧ ಯಾವುದೇ ಸುದ್ದಿಯನ್ನು ಪ್ರಕಟ ಮಾಡದಂತೆ 08-01-2018 ರಲ್ಲಿ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ತಡೆ ಆಜ್ಞೆ ಪಡೆದುಕೊಂಡ ಆರ್.ಅಶೋಕ್ ಅವರಿಗೆ ಮಾನ್ಯ ಮುಖ್ಯಮಂತ್ರಿಗಳನ್ನಾಗಲಿ, ಉಪ ಮುಖ್ಯಮಂತ್ರಿಗಳನ್ನಾಗಲಿ ಅಥವಾ ಕಾಂಗ್ರೆಸ್ ಪಕ್ಷವನ್ನಾಗಲಿ ಟೀಕಿಸುವ ನೈತಿಕತೆ ಇದೆಯೇ ? ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರ 2500 ಎಕರೆಯ ಈ ಭೂ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಒತ್ತಾಯಿಸಿದರು.
ಆರ್.ಅಶೋಕ್ ರವರು ಹಿಂದಿನ ಸಾರಿಗೆ ಸಚಿವರಾಗಿ ಬಸ್ ಖರೀದಿಯಲ್ಲಿ ನಡೆಸಿರುವ ಆರೋಪಗಳ ಮೇಲೆ ತನಿಖೆ ಆಗಬೇಕಾಗಿರುತ್ತದೆ. 143 ಟಾಟಾ ಮಾರ್ಕೋಪೋಲೋ ಬಸ್ ಖರೀದಿಯಲ್ಲಿ ಅವ್ಯವಹಾರದ ಆರೋಪಗಳಿದ್ದು, ಇದರ ಮೇಲೆ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಬೇಕು. ನರ್ಮ್ ಯೋಜನೆಯ ಅಡಿಯಲ್ಲಿ ಬಸ್ ಖರೀದಿ ಮತ್ತು ಬಸ್ ನಿಲ್ದಾಣಗಳ ನಿರ್ಮಾಣದಲ್ಲಿ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿರುವ ಆರೋಪಗಳಿದ್ದು, ಸಾರ್ವಜನಿಕ ಸಂಪತ್ತಿನ ಸಂರಕ್ಷಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಆರೋಪ ರಹಿತವಾದ ಒಬ್ಬ ಶಾಸಕರನ್ನು ಕರ್ನಾಟಕ ವಿಧಾನಸಭೆಗೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಲು ವಿಫಲವಾಗಿರುವ ಕರ್ನಾಟಕದ ಭಾರತೀಯ ಜನತಾ ಪಕ್ಷವು ಅನಿವಾರ್ಯವಾಗಿ ಸಾಂದರ್ಭಿಕವಾಗಿ ಇಂತಹ ಆರೋಪಿತರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡುವುದರ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿರುತ್ತದೆ. ಇತಿಹಾಸದ ಕರ್ನಾಟಕದ ವಿಧಾನಸಭೆಗೆ ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕರನ್ನು ನೀಡಲು ವಿಫಲವಾಗಿರುವ ಭಾರತೀಯ ಜನತಾ ಪಕ್ಷವು ಸಾರ್ವಜನಿಕವಾಗಿ ಕರ್ನಾಟಕ ಜನರ ಕ್ಷಮೆ ಕೇಳಲು ಒತ್ತಾಯಿಸಿದ್ದಾರೆ.
ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್