ಬೆಂಗಳೂರು: ಜೂನ್, 26 ರಿಂದ ಜುಲೈ, 05 ರವರೆಗೆ ನಡೆಯುವ ದ್ವಿತೀಯ ಪಿ.ಯು.ಸಿ ಪರೀಕ್ಷೆ-3 ಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರ-ಕಾಲೇಜುಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು, ಇನ್ನಾವುದೇ ವಸ್ತುಗಳನ್ನು ಹಂಚುವುದು/ ರವಾನಿಸುವುದು ಮತ್ತಿತರ ಚಟುವಟಿಕೆ ಸಂಪೂರ್ಣ ನಿಷೇಧಿಸಿದೆ.
ಪರೀಕ್ಷಾ ಕೇಂದ್ರದೊಳಗೆ ಮುಖ್ಯ ಅಧೀಕ್ಷಕರು ಕ್ಯಾಮರಾ ಹೊಂದಿರದ ಸಾಮಾನ್ಯ ಮೊಬೈಲ್ ಮಾತ್ರ ಇರಿಸಿಕೊಳ್ಳಬಹುದು. ಉಳಿದಂತೆ ಎಲ್ಲಾ ಪರೀಕ್ಷಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್, ಸ್ಮಾಟ್ ವಾಚ್ ಮುಂತಾದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಿದೆ.
ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಿದೆ. ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು, ಮಾಹಿತಿಯನ್ನು ರವಾನಿಸುವ, ತಿಳಿಸುವ ಸಲುವಾಗಿ ಸಂಜ್ಞೆಗಳನ್ನು ಮಾಡುವುದು ಮುಂತಾದ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷೆ ಮುಗಿಯುವ ವರೆಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ಮತ್ತು ಈ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದೆ.