ಬೆಂಗಳೂರು : ಜಾಗತಿಕ ಹೂಡಿಕೆದಾರರ ಸಮಾವೇಶ – 2025″ ಮುಂದಿನ ವರ್ಷ ಫೆಬ್ರವರಿ 12 ರಿಂದ 14ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯುವ ಕನ್ನಡಿಗರ ಕೌಶಲ್ಯಗಳಿಗೆ ತಕ್ಕ ಉದ್ಯೋಗ ಒದಗಿಸುವ, ರಾಜ್ಯದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆ ನಿಟ್ಟಿನಲ್ಲಿ “ಗೇಮ್ ಚೇಂಜರ್” ಆಗಬಹುದೆಂಬ ನಿರೀಕ್ಷೆಯಿರುವ “ಜಾಗತಿಕ ಹೂಡಿಕೆದಾರರ ಸಮಾವೇಶ – 2025” ಮುಂದಿನ ವರ್ಷ ಫೆಬ್ರವರಿ 12 ರಿಂದ 14ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದರ ಪೂರ್ವಭಾವಿ ಸಮಾವೇಶದಲ್ಲಿ ನಿನ್ನೆ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರಕಾರವು ಗ್ರಾಮೀಣಾಭಿವೃದ್ಧಿ ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಸಾಧಿಸಲು ಪಣ ತೊಟ್ಟಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಕೈಗಾರಿಕಾ ಕ್ಲಸ್ಟರ್ ಗಳನ್ನು ಬೆಳೆಸಲು ತೀರ್ಮಾನಿಸಲಾಗಿದೆ. ಮಹಾನಗರಗಳ ಆಚೆಗೂ ಆರ್ಥಿಕ ಪ್ರಗತಿಯನ್ನು ಕೊಂಡೊಯ್ಯಬೇಕು ಎನ್ನುವುದು ನಮ್ಮ ಸಂಕಲ್ಪವಾಗಿದೆ ಎಂದು ಅವರು ನುಡಿದರು.
ಸ್ಥಳೀಯ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು, ವಿಶೇಷ ಪರಿಣತ ಉದ್ದಿಮೆಗಳನ್ನು ಬೆಳೆಸಲು ಸರಕಾರ ಬದ್ಧವಾಗಿದೆ. ಇದಕ್ಕಾಗಿ ಎಲೆಕ್ಟ್ರಾನಿಕ್ಸ್, ಆಟೋ ಮತ್ತು ಇ.ವಿ., ಫಾರ್ಮಸುಟಿಕಲ್ಸ್, ಜವಳಿ ಮುಂತಾದ ವಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚುಹೆಚ್ಚು ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗಸೃಷ್ಟಿ ಎರಡಕ್ಕೂ ನಾವು ಒತ್ತು ಕೊಡುತ್ತಿದ್ದೇವೆ ಎಂದು ಅವರು ವಿವರಿಸಿದರು.