ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೂ ಆದ್ಯ ಗಮನ ಹರಿಸಲಾಗುತ್ತಿದೆ. ಜೊತೆಗೆ ಕಳೆದ ಬಾರಿಯಂತೆ ಈ ಸಲವೂ ನವೋದ್ಯಮಗಳಿಗೆ ಬಂಡವಾಳ ಸೆಳೆಯಲು ವಿಶೇಷ ಉಪಕ್ರಮ ಅಳವಡಿಸಿಕೊಳ್ಳುತ್ತಿದ್ದೇವೆ. ಇದರ ಭಾಗವಾಗಿ ‘ಎಸ್ಎಂಇ ಕನೆಕ್ಟ್- 25’ ಮತ್ತು ‘ವೆಂಚರೈಸ್- 24’ ಪರಿಕಲ್ಪನೆಗಳನ್ನು ರೂಪಿಸಲಾಗಿದೆ ಎಂಬುದಾಗಿ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಮುಂಬರುವ ಫೆಬ್ರವರಿ 12, 13 ಮತ್ತು 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಜಾಗತಿಕ ಹೂಡಿಕೆದಾರರ ಸಮಾವೇಶ’ದ ಭಾಗವಾಗಿ ಬುಧವಾರ ಇಲ್ಲಿ ನಡೆದ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ರಾಜ್ಯದ ತಯಾರಿಕಾ ವಲಯದ ಕಾರ್ಯ ಪರಿಸರವನ್ನು ಜಾಗತಿಕ ಮಟ್ಟದ ಉದ್ದಿಮೆಗಳಿಗೆ ತೋರಿಸಲು ನಾಲ್ಕು ರೋಡ್ ಶೋ ನಡೆಸಲಾಗುವುದು. ಅಲ್ಲದೆ, ಗಣ್ಯ ಉದ್ಯಮಿಗಳನ್ನು ಖುದ್ದಾಗಿ ಆಹ್ವಾನಿಸಲು ಜೂನ್ 24ರಿಂದ 28ರವರೆಗೆ ಜಪಾನಿನ ಟೋಕಿಯೋ, ನಗೋಯ ಮತ್ತು ಒಸಾಕ ನಗರಗಳಿಗೆ ಹಾಗೂ ಜುಲೈ ಮೊದಲ ವಾರದಲ್ಲಿ ದಕ್ಷಿಣ ಕೊರಿಯಾದ ಸಿಯೋಲ್, ಇಂಚೆಯಾನ್ ಮತ್ತು ಜಿಯಾಂಗಿ ನಗರಗಳಿಗೆ ಭೇಟಿ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ʼಬೆಳವಣಿಗೆಯ ಹೊಸಪರಿಕಲ್ಪನೆʼ (Reimagining Growth) ಧ್ಯೇಯದಡಿ ನಡೆಯಲಿರುವ ಸಮಾವೇಶದ ಮೂಲಕ ತಯಾರಿಕಾ ವಲಯ, ಮೂಲಸೌಕರ್ಯ ಅಭಿವೃದ್ಧಿ, ಐಟಿ, ಇಂಧನ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ ಗುಂಡೂರಾವ್, ವೈದ್ಯಕೀಯ ಮತ್ತು ಕೌಶಲ ಅಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ, ಜವಳಿ ಮತ್ತು ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಜರಿದ್ದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಸ್ವಾಗತಿಸಿದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ಹೂಡಿಕೆದಾರರ ಸಮಾವೇಶ ಹಾಗೂ ಉದ್ಯಮ ಬೆಳವಣಿಗೆ ಬಗ್ಗೆ ಪ್ರಾತ್ಯಕ್ಷೆ ಮೂಲಕ ವಿವರಿಸಿದರು ಹಲವು ಗಣ್ಯ ಉದ್ಯಮಿಗಳು ಉಪಸ್ಥಿತರಿದ್ದರು. ಸಣ್ಣ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ವಂದಿಸಿದರು.
BREAKING: ICSE, ISC ಸುಧಾರಣಾ ಪರೀಕ್ಷೆ 2024ರ ವೇಳಾಪಟ್ಟಿ ಪ್ರಕಟ | ICSE, ISC improvement exam 2024