ಚನ್ನಪಟ್ಟಣ : ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆಯಾಗಿದ್ದು ಚನ್ನಪಟ್ಟಣದಿಂದ. ಈಗ ಇಲ್ಲಿನ ಕೆಂಗಲ್ ಆಂಜನೇಯಸ್ವಾಮಿಯ ದೇವಸ್ಥಾನದಿಂದ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಂಗಲ್ ಆಂಜನೇಯ ದೇವಾಸ್ಥಾನದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು;
“ರಾಮನ ಭಂಟ ಆಂಜನೇಯ ಸೇವೆಯ ಪ್ರತೀಕ. ಅದೇ ರೀತಿ ನಾನು ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಬಂದಿದ್ದೇನೆ. ಅತಿ ಚಿಕ್ಕ ವಯಸ್ಸಿಗೆ ಬಂಗಾರಪ್ಪ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದು ನಿಮ್ಮ ಆಶೀರ್ವಾದದಿಂದ. ಚನ್ನಪಟ್ಡಣದ ಮಹಾಜನತೆಯ ಆಶೀರ್ವಾದ ನಮಗೆ ಬೇಕಾಗಿದೆ. ಜನರು ಪಕ್ಷಬೇಧವನ್ನು ಮರೆತು ಸರ್ಕಾರದ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನನ್ನ ಅಧಿಕಾರವನ್ನು ಚನ್ನಪಟ್ಟಣದ ಬದಲಾವಣೆಗೆ ಉಪಯೋಗಿಸಿಕೊಳ್ಳಬೇಕು.
ನನಗೆ ಬುದ್ಧಿವಾದ ಹೇಳಲು ಜನರು ಸೋಲಿಸಿದ್ದಾರೆ
ನನ್ನ ತಮ್ಮ ಡಿ.ಕೆ.ಸುರೇಶ್ ಗೆ ಸೋಲಾಗಿದೆ ಎಂದರೆ ನನ್ನಲ್ಲೇ ಏನೂ ನ್ಯೂನ್ಯತೆ ಇದೆ ಎಂದು ಕ್ಷೇತ್ರದ ಜನ ಅರ್ಥ ಮಾಡಿಸಿದ್ದಾರೆ. ನನಗೆ ಬುದ್ಧಿವಾದ ಹೇಳಲು ಜನರು ಈ ತೀರ್ಮಾನ ನೀಡಿದ್ದಾರೆ. ಇದನ್ನು ನಾನು ಅರಿತುಕೊಂಡಿದ್ದೇನೆ. ಈ ವಿಚಾರದಲ್ಲಿ ನಾನು ಯಾರನ್ನೂ ದೂಷಣೆ ಮಾಡಲು ಹೋಗುವುದಿಲ್ಲ. ಗೆದ್ದಿರುವ ವ್ಯಕ್ತಿ ತುಂಬು ಹೃದಯದಿಂದ ಸುರೇಶ್ ಗಿಂತ ಹೆಚ್ಚಿನ ಜನರ ಸೇವೆ ಮಾಡಲಿ ಎಂದು ಶುಭ ಕೋರುತ್ತೇನೆ.
ನಾನು ಧೈರ್ಯ ಕಳೆದುಕೊಳ್ಳುವವನಲ್ಲ
ನಾನು ಧೈರ್ಯ ಕಳೆದುಕೊಳ್ಳುವವನು, ಹೆದರಿ ಓಡಿ ಹೋಗುವವನಲ್ಲ. ಹೋರಾಟ ಮಾಡುವವನು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಭಕ್ತಿ ಇರುವ ಕಡೆ ಭಗವಂತ ಇದ್ದಾನೆ. ಪ್ರತಿ ಪಂಚಾಯ್ತಿಗೂ ಭೇಟಿ ನೀಡಿ ಚನ್ನಪಟ್ಟಣದ ಬದಲಾವಣೆಗೆ ನನಗೆ ಇರುವ ಶಕ್ತಿಯಲ್ಲಿ ಪ್ರಯತ್ನಿಸುತ್ತೇನೆ.
ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ
ಸರ್ಕಾರದಲ್ಲಿ ನಾನು ಉತ್ತಮ ಸ್ಥಾನದಲ್ಲಿದ್ದು ಚನ್ನಪಟ್ಟಣದ ಅಭಿವೃದ್ದಿಗೆ ರೂಪುರೇಷೆಯನ್ನು ಸಿದ್ದಪಡಿಸಿದ್ದೇನೆ. ಭೂಮಿ ಋಣ, ತಾಯಿ ಋಣ, ಅನ್ನದ ಋಣ, ಜನರ ಋಣ ತೀರಿಸ ಬೇಕಾಗಿರುವುದು ನಮ್ಮ ಕರ್ತವ್ಯ. ಈಗ ಮತ್ತೊಮ್ಮೆ ನಿಮ್ಮ ಋಣ ತೀರಿಸುವ ಅವಕಾಶ ದೊರೆತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿಯಿದ್ದು ಮುಂದಿನ ದಿನಗಳಲ್ಲಿ ಯಾರು ಅಭ್ಯರ್ಥಿ ಎಂಬುದನ್ನು ತಿಳಿಸುತ್ತೇನೆ.
ನಾನು ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ ಚನ್ನಪಟ್ಟಣದ ಒಂದು ಭಾಗ ನನ್ನ ಕ್ಷೇತ್ರದಲ್ಲಿತ್ತು. ನಿಮ್ಮ ಆಶೀರ್ವಾದದಿಂದ ಇಂದು ಉನ್ನತ ಸ್ಥಾನಕ್ಕೆ ಏರಿದ್ದೇನೆ. ಈ ಕ್ಷೇತ್ರದ ಮರುವಿಂಗಡಣೆ ಸಂದರ್ಭದಲ್ಲಿ ಬಿಟ್ಟು ಹೋಗವುವಾಗ ನೋವು ಉಂಟಾಗಿತ್ತು. ನಾನು ಹೋದರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದು ಇತಿಹಾಸ.
ಎಲ್ಲಾ ಜಾತಿ, ಧರ್ಮ, ಜನಾಂಗಗಳು ಇರುವ ಪ್ರಜ್ಞಾವಂತರ ಕ್ಷೇತ್ರವಿದು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 16 ಸಾವಿರ ಮತಗಳು ಮಾತ್ರ ಬಂದಿತ್ತು. ಇದರಿಂದ ನನಗೆ ನೋವಾಗಿತ್ತು. ಜನರ ತೀರ್ಮಾನ ಪ್ರಶ್ನೆ ಮಾಡಲು ಆಗುವುದಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಆಗಿರಬಹುದು ಆದರೆ ನಿಮ್ಮ ಮನೆ ಮಗ.
ದೇಶದ ಪ್ರಧಾನಮಂತ್ರಿಯಾದವರಿಂದ ತೆರವಾದ ರಾಮನಗರ ಕ್ಷೇತ್ರದಲ್ಲಿ ಸಿ.ಎಂ.ಲಿಂಗಪ್ಪ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಅವರನ್ನು 9 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದು ಈಗ ಇತಿಹಾಸ. ಲೋಕಸಭೆ ಚುನಾವಣೆಯಲ್ಲಿ 85 ಸಾವಿರ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಬಂದಿವೆ. ಅಂದರೆ ಸುಮಾರು 70 ಸಾವಿರದಷ್ಟು ಹೆಚ್ಚಿನ ಮತಗಳು ಬಂದಿದ್ದು. ಇದಕ್ಕೆ ಜನತಾದಳ, ರೈತಸಂಘ ಸೇರಿದಂತೆ ಎಲ್ಲಾ ವರ್ಗಗಳ ಜನರು ಸಹಾಯ ಮಾಡಿದ್ದಾರೆ.
ಚನ್ನಪಟ್ಟಣವನ್ನು ಚಿನ್ನದ ನಾಡು ಮಾಡುತ್ತೇನೆ
ರಾಮನಗರಕ್ಕೆ ಸುಮಾರು 1 ಸಾವಿರ ಕೋಟಿ ಅನುದಾನ ಕೊಟ್ಟಿದ್ದೇನೆ. ಚನ್ನಪಟ್ಟಣವನ್ನು ಚಿನ್ನದ ನಾಡನ್ನಾಗಿ ಮಾಡುತ್ತೇನೆ. ಮದ್ದೂರು ಗಡಿ, ಸಂಗಮ, ಹುಲಿಯೂರುದುರ್ಗ, ಕೋಲಾರ ಗಡಿ, ನಂದಿ ಬೆಟ್ಟದ ತನಕ ನಾವೆಲ್ಲಾ ಬೆಂಗಳೂರಿಗೆ ಸೇರಿದವರು. ಬೆಂಗಳೂರಿನ ಸುತ್ತ ಹೊಸ ನಾಮಕರಣ ಮಾಡಲಾಗುತ್ತದೆ. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು. ಚನ್ನಪಟ್ಟಣದ 15 ಕ್ಕೂ ಹೆಚ್ಚು ಗ್ರಾಮ ದೇವರುಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆಯುತ್ತೇನೆ.
Ayodhya Ram Mandir: ಅಯೋಧ್ಯೆ ರಾಮ ಮಂದಿರ ಆವರಣದಲ್ಲೇ ಗುಂಡಿನ ದಾಳಿ: ಓರ್ವ ಸಾವು