ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಪವಿತ್ರಾಗೌಡ ಮಾಜಿ ಪತಿ ಸಂಜಯ್ ಸಿಂಗ್ ಗೆ ದರ್ಶನ್ ಧಮ್ಕಿ ಹಾಕಿ ಹಲ್ಲೆ ನಡೆಸಲು ಮುಂದಾಗಿದ್ದರು ಎನ್ನುವ ಆರೋಪಕ್ಕೆ ಸಂಜಯ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ನನ್ನ ಮೇಲೆ ದರ್ಶನ್ ಅವರು ಹಲ್ಲೆ ನಡೆಸಿದ್ದಾರೆ ಎನ್ನುವುದು ಸುಳ್ಳು. ಮಗಳನ್ನು ಕಳುಹಿಸಿಕೊಡು ಎಂದು ಹಲವು ಬಾರಿ ಪವಿತ್ರಾಳಲ್ಲಿ ಕೇಳಿದ್ದೆ. ಕೋರ್ಟ್ ಮಗಳು ತಾಯಿ ಜೊತೆ ಇರಲಿ ಎಂದು ಹೇಳಿತ್ತು. ಹಾಗಾಗಿ ಸುಮ್ಮನಿದ್ದೆ. ನಾನು ದರ್ಶನ್ ಅವರನ್ನು ನೇರವಾಗಿ ಯಾವತ್ತೂ ನೋಡಿಲ್ಲ. ಅವರ ಜೊತೆ ಮಾತನಾಡಿಲ್ಲ. ನಾನು ಕೂಡ ಅವರ ದೊಡ್ಡ ಅಭಿಮಾನಿ. ನಿನ್ನೆಯಷ್ಟೇ ಮಗಳ ಜೊತೆ ಮಾತನಾಡಿದ್ದೇನೆ. ಅವಳು ಧೈರ್ಯವಾಗಿದ್ದಾಳೆ ಎಂದು ಸಂಜಯ್ ಹೇಳಿದ್ದಾರೆ.
ಈ ನಡುವೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.