ಬೆಂಗಳೂರು: ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆಯಿಂದಾಗಿ ಬರೋಬ್ಬರಿ 15,000 ಕೋಟಿ ನಷ್ಟವಾಗಿದೆ ಅಂತ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಅಂಕಿ ಅಂಶಗಳನ್ನು ಬಿಚ್ಚಿಟ್ಟಿರುವಂತ ಅವರು, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಡುಗೆ ಅನಿಲ
ಪೆಟ್ರೋಲ್, ಮತ್ತು ಡೀಸೆಲ್ ಬೆಲೆ ಕ್ರಮವಾಗಿ ರೂ.410, ರೂ. 72.26 ಮತ್ತು ರೂ. 57.28 ಆಗಿತ್ತು. ಇಂದು ಇವುಗಳ ಬೆಲೆ ಕ್ರಮವಾಗಿ ರೂ.805.5, ರೂ.104.21 ಮತ್ತು ರೂ.92.15 ಆಗಿದೆ ಎಂದಿದ್ದಾರೆ.
2014 ಮೊದಲು ಬ್ಯಾರೆಲ್ ಗೆ 109 ಡಾಲರ್ ನಷ್ಟಿದ್ದ ಕಚ್ಛಾ ತೈಲದ ಬೆಲೆ 2014ರ ನಂತರ 82 ಡಾಲರ್ ಗೆ ಇಳಿಕೆಯಾದರೂ ಪ್ರಧಾನಿ ನರೇಂದ್ರ ಮೋದಿಯವರು ಅಡುಗೆ ಅನಿಲದ ಬೆಲೆಯನ್ನು ರೂ.395, ಪೆಟ್ರೋಲ್ ಬೆಲೆಯನ್ನು ರೂ.31.95 ಮತ್ತು ಡೀಸೆಲ್ ಬೆಲೆಯನ್ನು ರೂ.34.87 ರಷ್ಟು ಹೆಚ್ಚಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಪೆಟ್ರೋಲ್ ಬೆಲೆಯನ್ನು ಎರಡರಿಂದ ಮೂರು ಪಟ್ಟು ಮತ್ತು ಡೀಸೆಲ್ ಬೆಲೆಯನ್ನು ಐದರಿಂದ ಹತ್ತು ಪಟ್ಟು ಹೆಚ್ಚಿಸಿದೆ. ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ರೀತಿ ಹಾಡಹಗಲೇ ಜನರನ್ನು ಸುಲಿಗೆ ಮಾಡುತ್ತಿದ್ದಾಗ ಕಣ್ಣು-ಬಾಯಿ ಎಲ್ಲವನ್ನೂ ಮುಚ್ಚಿಕೊಂಡು ಮೋದಿ ಗುಣಗಾನ ಮಾಡುತ್ತಾ ಜನರಿಗೆ ದ್ರೋಹ ಎಸಗುತ್ತಿದ್ದ ರಾಜ್ಯದ ಬಿಜೆಪಿ ನಾಯಕರು ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮೂರು ರೂಪಾಯಿಗಳಷ್ಟು ಹೆಚ್ಚಿಸಿದಾಗ ಎದೆ ಬಡಿದುಕೊಳ್ಳುತ್ತಿರುವುದು ಅವರ ಆತ್ಮವಂಚಕ ನಡವಳಿಕೆಗೆ ಸಾಕ್ಷಿಯಾಗಿದೆ.
ಇಷ್ಟು ಮಾತ್ರವಲ್ಲ 2021ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಜನತೆ ಸಿಡಿದೆದ್ದಾಗ ಬೆಲೆ ಕಡಿಮೆ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನತೆಯ ಆಕ್ರೋಶವನ್ನು ಕಡಿಮೆ ಮಾಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿಮೆ ಮಾಡಿ ರಾಜ್ಯದ ಖಜಾನೆಯನ್ನು ಬರಿದುಮಾಡಿದರು.
ಬೊಮ್ಮಾಯಿಯವರು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇಕಡಾ 35ರಿಂದ ಶೇಕಡಾ 25.2ಕ್ಕೆ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇಕಡಾ 24ರಿಂದ ಶೇಕಡಾ 14.34ಕ್ಕೆ ಇಳಿಸಿದ್ದರು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಂದಾಜು ರೂ.15,000 ಕೋಟಿ ನಷ್ಟ ಆಗಿದೆ. ಕೇಂದ್ರ ಸರ್ಕಾರದ ಸುಲಿಗೆಯನ್ನು ಪ್ರಶ್ನಿಸಿ ರಾಜ್ಯಕ್ಕೆ ಆಗುತ್ತಿದ್ದ ಅನ್ಯಾಯವನ್ನು ತಡೆಯಬೇಕಾಗಿದ್ದ ಬೊಮ್ಮಾಯಿ ಸರ್ಕಾರ, ಅನ್ಯಾಯ ಎಸಗುತ್ತಿರುವ ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ.
ನಮ್ಮ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯವರ್ಧಿತ ತೆರಿಗೆ ವಿಧಿಸಿ ಲೀಟರ್ ಗೆ ಸರಾಸರಿ ಮೂರು ರೂಪಾಯಿಗಳಷ್ಟು ಬೆಲೆ ಹೆಚ್ಚಿಸಿದರೂ ಈಗಲೂ ದಕ್ಷಿಣದ ಇತರ ರಾಜ್ಯಗಳು ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಇದೆ.
ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು 29.84% ಗೆ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 18.44% ಗೆ ಹೆಚ್ಚಳ ಮಾಡಿದ ನಂತರವೂ ಕರ್ನಾಟಕವು ತೈಲೋತ್ಪಾನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ.
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲೆ ಮೌಲ್ಯವರ್ಧಿತ ತೆರಿಗೆ ( ವ್ಯಾಟ್ ) 25% ಜೊತೆಗೆ ಹೆಚ್ಚುವರಿ ತೆರಿಗೆ ರೂ. 5.12 ಇದೆ. ಹಾಗೂ ಡೀಸೆಲ್ ಮೇಲೆ 21% ಇದೆ. ಇದಕ್ಕೆ ಹೋಲಿಸಿದರೆ ರಾಜ್ಯದ ಪರಿಷ್ಕೃತ ದರ ಕೂಡ ಜನರಿಗೆ ಹೊರೆಯಾಗದಂತಿದೆ.
ನಮ್ಮ ಸಮೀಪದ ಹೊಸೂರ್ ನಲ್ಲಿ (ತಮಿಳು ನಾಡು) ಪೆಟ್ರೋಲ್ ಬೆಲೆ ರೂ.102.84, ಕೇರಳದಲ್ಲಿ ಪೆಟ್ರೋಲ್ ಬೆಲೆ ರೂ.106.66, ಆಂಧ್ರಪ್ರದೇಶದಲ್ಲಿ ರೂ.109.44, ತೆಲಂಗಾಣದಲ್ಲಿ ಪೆಟ್ರೋಲ್ ಬೆಲೆ ರೂ.107.40 ಮತ್ತು ಮಹಾರಾಷ್ಟ್ರದಲ್ಲಿ ರೂ.104.46 ಆಗಿದೆ.
ಇದೆ ರೀತಿ ಡೀಸೆಲ್ ಬೆಲೆ ಕರ್ನಾಟಕದಲ್ಲಿ ರೂ. 85.95 ಇದ್ದದ್ದು ಈಗ ರೂ.88.97 ಆಗಿದೆ. ಡೀಸೆಲ್ ಬೆಲೆ ಹೊಸೂರು (ತಮಿಳುನಾಡು) ನಲ್ಲಿ ರೂ.94.91, ಕೇರಳದಲ್ಲಿ ರೂ.95.60, ಆಂಧ್ರಪ್ರದೇಶದಲ್ಲಿ ರೂ.97.29, ತೆಲಂಗಾಣದಲ್ಲಿ ರೂ.95.65 ಮತ್ತು ಮಹಾರಾಷ್ಟ್ರದಲ್ಲಿ ರೂ.90.45 ಆಗಿದೆ.
ಕೇಂದ್ರ ಸರ್ಕಾರ ಜಿಎಸ್ ಟಿ ಜಾರಿಗೊಳಿಸುವ ಮೂಲಕ ಸಂಪನ್ಮೂಲ ಸಂಗ್ರಹದ ಎಲ್ಲ ಅವಕಾಶಗಳನ್ನು ರಾಜ್ಯಗಳಿಂದ ಕಿತ್ತು ಕೊಂಡಿದೆ. ಸದ್ಯಕ್ಕೆ ಸಂಪನ್ಮೂಲ ಸಂಗ್ರಹಕ್ಕೆ ಉಳಿದಿರುವ ಏಕೈಕ ಅವಕಾಶ ತೈಲೋತ್ತನಗಳ ಮೇಲಿನ ತೆರಿಗೆ ಸಂಗ್ರಹ. ಕೇಂದ್ರ ಸರ್ಕಾರದಿಂದ ಒಂದೆಡೆ ತೆರಿಗೆ ಹಂಚಿಕೆಯಲ್ಲಿ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗಳಷ್ಟು ವಂಚನೆ, ಇನ್ನೊಂದೆಡೆ ಜಿಎಸ್ ಟಿ ಪರಿಹಾರದಲ್ಲಿ ಮೋಸ. ಇದರ ಜೊತೆಗೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನದಲ್ಲಿಯೂ ಕಡಿತ. ಆಗಾಗ್ಗೆ ಕೇಂದ್ರ ಸರ್ಕಾರವು ತೆರಿಗೆ ಕಡಿತಗೊಳಿಸಿದ ಹೊರತಾಗಿಯೂ ಈಗಿನ ಅಬಕಾರಿ ಸುಂಕವು ಪೆಟ್ರೋಲ್ ಮೇಲೆ ರೂ. 19.9 ಹಾಗೂ ಡೀಸೆಲ್ ಮೇಲೆ ರೂ. 15.8 ಇದೆ. ನರೇಂದ್ರ ಮೋದಿ ಅವರ ಸರ್ಕಾರ ಜನಹಿತದ ದೃಷ್ಟಿಯಿಂದ ಈ ತೆರಿಗೆಯನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜನಪರವಾದ ಗ್ಯಾರಂಟಿ ಯೋಜನೆಗಳಿಂದ ಜನಪ್ರಿಯವಾಗುತ್ತಿರುವ ನಮ್ಮ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ನಮ್ಮ ಸಂಪನ್ಮೂಲವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ. ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಮಾಡಬೇಕೆಂಬುದು ಕೇಂದ್ರದ ಬಿಜೆಪಿ ಸರ್ಕಾರದ ದುರುದ್ದೇಶ. ಈ ದುರುದ್ದೇಶದ ಈಡೇರಿಕೆಗೆ ನಾವು ಅವಕಾಶ ನೀಡುವುದಿಲ್ಲ.
ರಾಜ್ಯ ಸರ್ಕಾರದ ಮೌಲ್ಯವರ್ಧಿತ ತೆರಿಗೆಯಲ್ಲಾದ ಬದಲಾವಣೆಯಿಂದ ಸಂಗ್ರಹವಾಗುವ ಹಣವು ನಾಡಿನ ಜನರ ಮೂಲಭೂತ ಸೇವೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬಳಸಲ್ಪಡುತ್ತದೆ ಎಂಬ ಗ್ಯಾರಂಟಿಯನ್ನು ನಾನು ನೀಡುತ್ತೇನೆ. ನಾವು ಸರ್ವರ ಹಿತಕಾಯಲು ಮತ್ತು ಜವಾಬ್ದಾರಿಯುತ ಸರ್ಕಾರವಾಗಿ ಮುನ್ನಡೆಯಲು ಬದ್ಧರಿದ್ದೇವೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ದೇಶದ ರೈತರಿಗೆ ಗುಡ್ ನ್ಯೂಸ್ ; ನಾಳೆ ‘ಪಿಎಂ ಕಿಸಾನ್ 17ನೇ ಕಂತು’ ಬಿಡುಗಡೆ, ಅನ್ನದಾತರ ಖಾತೆಗೆ ₹2000 ಜಮೆ
BREAKING : ಜಾರ್ಖಂಡ್’ನಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ; ನಾಲ್ವರು ನಕ್ಸಲರ ಹತ್ಯೆ, ಇಬ್ಬರ ಬಂಧನ