ಶಿವಮೊಗ್ಗ: ಈ ಹಿಂದೆ 2019ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ, ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರಿಗೆ ಪೌಷ್ಟಿಕ ಆಹಾರ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಅವರ ಮಹತ್ವಾಕಾಂಕ್ಷೆಯ ಯೋಜನೆ ಸ್ಥಗಿತಗೊಂಡಿದೆ. ಈ ಪೌಷ್ಟಿಕ ಆಹಾರ ಯೋಜನೆಯನ್ನು ಪುನರ್ ಪ್ರಾರಂಭಿಸುವಂತೆ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ಆಗ್ರಹಿಸಿದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಸಾಮಾಜಿಕ ಹೋರಾಟಗಾರ ಶಿವಾನಂದ ಕುಗ್ವೆ ಅವರು, ಹೆಚ್. ಆನಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದಂತ ಸಂದರ್ಭದಲ್ಲಿ, ಸಿಎಂ ಸಿದ್ಧರಾಮಯ್ಯ ಅವರು ಅರಣ್ಯ ಹಾಗೂ ಅರಣ್ಯಗಳ ಅಂಚಿನಲ್ಲಿ ವಾಸ ಮಾಡುತ್ತಾ, ಭೂಹೀನ ಕೃಷಿ ಕಾರ್ಮಿಕರಾಗಿರುವ ಹಸಲರು ಜನಾಂಗಕ್ಕೆ ಪೌಷ್ಟಿಕ ಆಹಾರ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದ್ರೇ ಈ ಯೋಜನೆ ಈಗ ಸ್ಥಗಿತಗೊಂಡಿದ್ದು, ಹಸಲರು ಸಮುದಾಯದವರಿಗೆ ಒಂದೊತ್ತಿನ ಊಟಕ್ಕೂ ಸಮಸ್ಯೆ ಉಂಟಾಗಿದೆ ಎಂದರು.
2019ರಲ್ಲಿ ಸಿಎಂ ಸಿದ್ಧರಾಮಯ್ಯ ಜಾರಿಗೊಳಿಸಿದ್ದಂತ ಯೋಜನೆಯನ್ನು ಕಳೆದ ನಾಲ್ಕು ತಿಂಗಳಿನಿಂದ ನಿಲ್ಲಿಸಲಾಗಿದೆ. ಈ ಪೌಷ್ಟಿಕ ಆಹಾರ ಯೋಜನೆಯನ್ನು ಪುನರ್ ಅನುಷ್ಟಾನಗೊಳಿಸಬೇಕು. ಇಲ್ಲದಿದ್ದರೇ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ಈ ಬಳಿಕ ಮಾತನಾಡಿದಂತ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು ಅವರು, ಪಶ್ಚಿಮ ಘಟ್ಟ ವ್ಯಾಪ್ತಿಯ ಅರಣ್ಯವಾಸಿಗಳಾಗಿ ಹಸಲರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡವಾಗಿರುವಂತ ಈ ಸಮುದಾಯದವರು ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದಾರೆ. ಇವರಿಗಾಗಿ 14 ಐಟಂಗಳನ್ನು ಹೊಂದಿದ್ದಂತ ಪೌಷ್ಟಿಕ ಆಹಾರದ ಕಿಟ್ ನೀಡಲಾಗುತ್ತಿತ್ತು. ಇದರಿಂದ ನಮಗೆ ಪೌಷ್ಟಿಕಾಂಶ ಯುಕ್ತ ಆಹಾರ ಸಿಗುವಂತೆ ಆಗುತ್ತಿತ್ತು ಎಂದರು.
ಬೇರೆ ಜಿಲ್ಲೆಗಳಲ್ಲಿ ಅಂಗನವಾಡಿ ಮೂಲಕ ಪರಿಶಿಷ್ಟ ಪಗಂಡದವರಿಗೆ ಪೌಷ್ಟಿಕ ಆಹಾರ ಯೋಜನೆಯಡಿ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ. ಸಾಗರ, ಹೊಸನಗರದಲ್ಲಿ ಮಾತ್ರ ನಾವು ಎಲ್ಲಿ ಇಳಿಸ್ತಿವೋ ಅಲ್ಲಿ ಇಸ್ಕೋಂಡು ಹೋಗಿ ಅನ್ನೋ ಧೋರಣೆಯನ್ನು ಅಧಿಕಾರಿಗಳು ತೋರುತ್ತಿದ್ದಾರೆ. ಇದು ಕೂಡ ತಪ್ಪಬೇಕು. ಅಂಗನವಾಡಿ ಮೂಲಕವೇ ಪೌಷ್ಟಿಕ ಆಹಾರ ವಿತರಣೆ ವ್ಯವಸ್ಥೆ ಆಗಬೇಕು ಎಂಬುದಾಗಿ ಒತ್ತಾಯಿಸಿದರು.
ರಾಜ್ಯ ಸರ್ಕಾರದಿಂದ ಪೌಷ್ಟಕ ಆಹಾರ ಯೋಜನೆಯನ್ನು ಕಳೆದ ಕೆಲ ತಿಂಗಳಿನಿಂದ ನಿಲ್ಲಿಸಲಾಗಿದೆ. ಇದರಿಂದ ಹಸಲರು ಜನ ಸಮುದಾಯಕ್ಕೆ ತೊಂದರೆ ಉಂಟಾಗಿದೆ. ಸಿಎಂ ಸಿದ್ಧರಾಮಯ್ಯ ಅವರು ತಮ್ಮ ಅಧಿಕಾರವಧಿಯಲ್ಲಿ ಈ ಯೋಜನೆ ಜಾರಿಗೊಳಿಸಿದ್ರು. ಈಗ ತಾವೇ ಮುಖ್ಯಮಂತ್ರಿಯಾಗಿದ್ದೀರಿ. ನಿಮ್ಮ ಅವಧಿಯಲ್ಲಿ ಜಾರಿಗೊಳಿಸಿದ್ದಂತ ಮಹತ್ವಾಕಾಂಕ್ಷೆಯ ಯೋಜನೆ ಸ್ಥಗಿತಗೊಂಡಿದೆ. ಮತ್ತೆ ಪ್ರಾರಂಭಿಸಿ, ಪೌಷ್ಟಿಕ ಆಹಾರ ವಿತರಣೆಯಾಗುವಂತೆ ಮಾಡಬೇಕು. ಒಂದು ವೇಳೆ ಪುನರ್ ಪ್ರಾರಂಭಿಸದೇ ಹೋದ್ರೆ ಜೂನ್.19ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡೋದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಮ್ಮ ಹಿರೇಮನೆ, ಹೊಸನಗರದ ನರಸಿಂಹ, ಅಣ್ಣಪ್ಪ, ಹರೀಶ್ ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
BREAKING : ʻUGC NETʼ ಪರೀಕ್ಷೆಗೆ ʻಪ್ರವೇಶ ಪತ್ರʼ ಬಿಡುಗಡೆ : ಈ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ