ಚಿತ್ರದುರ್ಗ : ಸ್ಯಾಂಡಲ್ ವುಡ್ ನಟ ದರ್ಶನ್ ಹಾಗೂ ಸಹಚರರಿಂದ ಹತ್ಯೆಯಾದ ರೇಣುಕಾಸ್ವಾಮಿ ಅಂತ್ಯಕ್ರಿಯೆಯನ್ನು ಚಿತ್ರದುರ್ಗದಲ್ಲಿ ತಡರಾತ್ರಿ ವೀರಶೈವ ಸಂಪ್ರದಾಯದಂತೆ ನಡೆಸಲಾಯಿತು.
ರೇಣುಕಾಸ್ವಾಮಿ ಪಾರ್ಥಿವ ಶರೀರರವನ್ನು ಮಂಗಳವಾರ ರಾತ್ರಿ ಚಿತ್ರದುರ್ಗಕ್ಕೆ ತರಲಾಗಿದ್ದು, ಪಾರ್ಥಿವ ಶರೀರ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು. ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರು, ಸಂಬಂಧಿಕರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.
ರೇಣುಕಾಸ್ವಾಮಿ ಕೊಲೆ ಖಂಡಿಸಿ ಇಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ನಟಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಆತನ ಆಪ್ತರು ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಚಿತ್ರದುರ್ಗದಲ್ಲಿ ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿವೆ.
ಚಿತ್ರದುರ್ಗದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಲಿದ್ದು, ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ರೇಣುಕಾ ಸ್ವಾಮಿ ಹತ್ಯೆಯನ್ನು ಈಗಾಗಲೇ ಜಿಲ್ಲಾ ವೀರಶೈವ ಸಮಾಜ ಖಂಡಿಸಿದ್ದು, ನಾಳೆ ಜಿಲ್ಲೆಯ ಪ್ರಮುಖ ವೀರಶೈವ ನೇತಾರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.