ಬೆಂಗಳೂರು: ಸೋಮಣ್ಣ ಅವರು ಜಲಶಕ್ತಿ ಸಚಿವರಾಗಿರುವುದರಿಂದ ತಾರತಮ್ಯವಾಗಲಿದೆ ಎಂಬ ತಮಿಳುನಾಡು ಕಾಂಗ್ರೆಸ್ ಪ್ರಧಾನಿಗೆ ಬರೆದಿರುವ ಪತ್ರದ ಬಗ್ಗೆ ಕೇಳಿದಾಗ, “ಒಮ್ಮೆ ಸಚಿವರಾದರೆ ಅವರು, ಇಡೀ ದೇಶಕ್ಕೆ ಸಚಿವರಾಗುತ್ತಾರೆಯೇ ಹೊರತು ಅವರು ಪ್ರತಿನಿಧಿಸುವ ರಾಜ್ಯಕ್ಕೆ ಸಚಿವರಾಗುವುದಿಲ್ಲ. ಯಾವುದೇ ರಾಜಕಾರಣಿಯಾದರೂ ತಮ್ಮ ರಾಜ್ಯ ಹಾಗೂ ಊರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದು ಸಹಜ. ನಾನು ಸಚಿವನಾಗಿದ್ದಾಗ ಪೈಲೆಟ್ ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿದ್ದೆ. ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಕಲುಬುರ್ಗಿಯಲ್ಲಿ ಇಎಸ್ಐ ಆಸ್ಪತ್ರೆ ಕಟ್ಟಿಸಿದರು. ಇದು ಸಹಜ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸೋಮಣ್ಣ ಅವರು ಈಗಷ್ಟೇ ಸಚಿವರಾಗಿ ಕಣ್ಣು ಬಿಡುತ್ತಿದ್ದಾರೆ. ನಮ್ಮ ರಾಜ್ಯದಿಂದ ಮಂತ್ರಿಯಾದವರು ರಾಜ್ಯಕ್ಕೆ ಶಕ್ತಿ ತುಂಬಲಿ. ನಿರ್ಮಲಾ ಸೀತರಾಮನ್ ಅವರು ಹಣಕಾಸು ಸಚಿವೆಯಾಗಿ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಘೋಷಣೆ ಮಾಡಿದರು. ಆದರೆ ಹಣ ಬರಲಿಲ್ಲ. ಏನು ಮಾಡಲು ಸಾಧ್ಯ? ಯಾವುದೇ ಕೆಲಸವಾದರೂ ಕಾನೂನು ಬದ್ಧವಾಗಿ ಅವಕಾಶ ಇದ್ದರೆ ಅದನ್ನು ಮಾಡುತ್ತಾರೆ. ಆದರೆ ಕಾವೇರಿ ವಿಚಾರ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ತಮಿಳುನಾಡಿನವರು ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ಪ್ರಧಾನಮಂತ್ರಿಗಳು ಅಂತಿಮ ತೀರ್ಮಾನ ಮಾಡುತ್ತಾರೆ. ನಾವು ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ” ಎಂದರು.
ಬಿಬಿಎಂಪಿ ಚುನಾವಣೆ ಬಗ್ಗೆ ಕೇಳಿದಾಗ, “ಬಿಬಿಎಂಪಿ ಚುನಾವಣೆ ಮಾಡಲು ಮೀಸಲಾತಿ ಸೇರಿದಂತೆ ಇತರೆ ಪ್ರಕ್ರಿಯೆ ಪೂರ್ಣಗೊಳಿಸಲು ತಯಾರು ಮಾಡಿದ್ದೇವೆ. ಆದಷ್ಟು ಬೇಗ ಚುನಾವಣೆ ಮಾಡುತ್ತೇವೆ” ಎಂದರು.
ಬಿಬಿಎಂಪಿ ವಿಭಜನೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಈ ಹಿಂದೆಯೇ ಪ್ರಸ್ತಾವನೆ ಇತ್ತು. ಆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಏನೇ ಇದ್ದರೂ ಆದಷ್ಟು ಬೇಗ ಚುನಾವಣೆ ಮಾಡಲಾಗುವುದು. ನಾವು ಮಾಡದಿದ್ದರೆ ಕೋರ್ಟ್ ಬಿಡುವುದಿಲ್ಲ” ಎಂದರು.
ಕೇಂದ್ರದ ನೂತನ ಸಚಿವರಿಗೆ ಶುಭ ಕೋರುತ್ತೀರಾ ಎಂದು ಕೇಳಿದಾಗ, “ಮಾಧ್ಯಮಗಳ ಮೂಲಕವೇ ನಾನು ಕೇಂದ್ರದ ನೂತನ ಸಚಿವರಿಗೆ ಶುಭ ಕೋರುತ್ತೇನೆ. ಎಲ್ಲರೂ ರಾಜ್ಯಕ್ಕೆ ಶಕ್ತಿ ತುಂಬಲಿ, ದೇಶಕ್ಕೆ ಸೇವೆ ಮಾಡಲಿ” ಎಂದರು.
ಇನ್ನು ಘನತ್ಯಾಜ್ಯ ಸಂಗ್ರಹ ವಿಚಾರವಾಗಿ ರೂ.100 ಶುಲ್ಕದ ಬಗ್ಗೆ ಕೇಳಿದಾಗ, “ಘನತ್ಯಾಜ್ಯ ವಿಲೇವಾರಿ ನಿಯಮದಲ್ಲಿ ಹೆಚ್ಚಾಗಿದ್ದು, ಹೊಣೆಗಾರಿಕೆ ನಿಗದಿ ಮಾಡಬೇಕಿದೆ. ಬೆಂಗಳೂರಿನ ಹೊರವಲಯದ ನಾಲ್ಕು ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕಿದೆ. ಸದ್ಯದಲ್ಲೇ ಈ ವಿಚಾರವಾಗಿ ಟೆಂಡರ್ ಕರೆಯಲಾಗುವುದು. ಈ ವಿಚಾರವಾಗಿ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು” ಎಂದರು.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಬಂಧನದ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಈ ವಿಚಾರವಾಗಿ ಗೃಹಸಚಿವರು ಮಾಹಿತಿ ನೀಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ” ಎಂದು ತಿಳಿಸಿದರು.
ಕೇಂದ್ರ ಸಚಿವ ಸಂಪುಟದಲ್ಲಿ ಕನ್ನಡಿಗರಿಗೆ ನೀಡಿರುವ ಖಾತೆಗಳ ಬಗ್ಗೆ ಕೇಳಿದಾಗ, “ಅದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕೆ ಹೆಚ್ಚಿನ ಕೈಗಾರಿಕೆ ತಂದು, ಅನುದಾನ ತಂದು ಕರ್ನಾಟಕಕ್ಕೆ ಶಕ್ತಿ ತುಂಬಲಿ” ಎಂದರು.
BREAKING: ವಿಮಾನ ಅಪಘಾತದಲ್ಲಿ ಮಲವಿ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸೇರಿ 9 ಮಂದಿ ಸಾವು: ಅಧ್ಯಕ್ಷರ ಖಚಿತ ಮಾಹಿತಿ
ದರ್ಶನ್ ಬಂಧಿಸದಂತೆ ಪೊಲೀಸರಿಗೆ ಒತ್ತಡ : ರಾಜಕಾರಣಿಗಳು, ಸ್ಯಾಂಡಲ್ ವುಡ್ ಹಿರಿಯರಿಂದ ಪ್ರೆಶರ್!